ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಕಿರುಕುಳ, ಆರೋಪಿ ಸಹಿತ ಮೂವರು ಸೆರೆ

Arrest Kaidhi
Published on

ಕಡಬ: ಕಳಾರದಲ್ಲಿರುವ ಖಾಸಗಿ ಪಂಚಕರ್ಮ ಚಿಕಿತ್ಸಾಲಯದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಚಿಕಿತ್ಸಾಲಯದ ಚಿಕಿತ್ಸಕ, ಆತನಿಗೆ ಸಹಕರಿಸುತ್ತಿದ್ದಾತ ಹಾಗೂ ಅಲ್ಲಿನ ಕೆಲಸದಾಕೆಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಅಬ್ರಹಾಂ ಎಂಬಾತ ಕಳೆದ ಹಲವಾರು ವರ್ಷಗಳಿಂದ ಕಳಾರದಲ್ಲಿ ಮಸಾಜ್ ಸೆಂಟರ್ ನಡೆಸುತ್ತಿದ್ದ, ಎರಡು ವರ್ಷಗಳ ಹಿಂದೆ ಪಂಚಕರ್ಮ ಚಿಕಿತ್ಸಾಲಯ ತೆರೆದಿದ್ದ. ಈ ಚಿಕಿತ್ಸಾಲಯಕ್ಕೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರಿಗೆ ಸೆ. 23ರಂದು ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳೆಯರು ಕಡಬ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದರು.

ಶುಕ್ರವಾರ ರಾತ್ರಿಯೇ ಚಿಕಿತ್ಸಾಲಯಕ್ಕೆ ದಾಳಿ ನಡೆಸಿದ್ದ ಪೊಲೀಸರು ಅಬ್ರಹಾಂ ಹಾಗೂ ಆತನಿಗೆ ಸಹಕರಿಸುತ್ತಿದ್ದ ಮತ್ತೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನೂ ರಾತ್ರಿ ವಶಕ್ಕೆ ಪಡೆದಿದ್ದು, ತಡರಾತ್ರಿಯಾದ ಕಾರಣ ಆಕೆಯನ್ನು ಮಹಿಳಾ ಪೊಲೀಸರ ಸುಪರ್ದಿಯಲ್ಲಿ ಇಟ್ಟುಕೊಳ್ಳಲಾಗಿತ್ತು. ಆರೋಪಿ ಅಬ್ರಹಾಂ ಚಿಕಿತ್ಸಾಲಯಕ್ಕೆ ಚಿಕಿತ್ಸೆಗೆಂದು ಬರುತ್ತಿದ್ದ ಮಹಿಳೆಯರು ಹಾಗೂ ಯುವತಿಯರಿಗೂ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬಾಲಕಿಯೋರ್ವಳಿಗೂ ಕಿರುಕುಳ ನೀಡಿದ್ದ. ಆದರೆ ಈ ಸಂಬಂಧ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net