

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೆಡಿಕಲ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಸರಗೋಡು ನಾಟೆಕಲ್ಲು ಬಿಸ್ಮಿಲ್ಲಾ ಹೌಸ್ ನಿವಾಸಿ ಇಬ್ರಾಹಿಂ ಬಾದುಷಾ(28) ಎಂಬಾತನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್ಕೋಸ್ಟ್ ಎಕ್ಸ್ಪ್ರೆಸ್ ರೈಲಲ್ಲಿ ಮಂಗಳವಾರ ಘಟನೆ ನಡೆದಿದ್ದು, ರೈಲು ನೀಲೇಶ್ವರ ತಲುಪುತ್ತಿದ್ದಂತೆ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯನ್ನು ಆರೋಪಿ ಏಕಾಏಕಿ ಬಿಗಿದಪ್ಪಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಈತನಿಂದ ಬಿಡಿಸಿಕೊಂಡ ವಿದ್ಯಾರ್ಥಿನಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ರೈಲು ಕಾಞಂಗಾಡಿಗೆ ತಲುಪಿದಾಗ ಆರೋಪಿ ಇನ್ನೊಂದು ಬೋಗಿಯನ್ನೇರಿದ್ದ. ರೈಲು ಕಾಸರಗೋಡು ನಿಲ್ದಾಣ ತಲುಪಿದಾಗ ಆರೋಪಿಯನ್ನು ಸೆರೆಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಪೊಲೀಸರನ್ನು ದೂಡಿಹಾಕಿ ತನ್ನ ಅಂಗಿಬಿಚ್ಚಿ ಪರಾರಿಯಾಗಲು ಯತ್ನಿಸಿದ್ದವನನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.