

ತರೀಕೆರೆ: ಯರೇಹಳ್ಳಿ, ಎಂ.ಸಿ.ಹಳ್ಳಿ, ಎಚ್.ರಂಗಾಪುರ ಸೇರಿ ತಾಲೂಕಿನ ಬಹುತೇಕ ಗ್ರಾಮಗಳ ದಲಿತರಿಗೆ ಸರ್ಕಾರ ಸಾಗುವಳಿ ಚೀಟಿ ನೀಡಿದ್ದರೂ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಜಮೀನು ಸಾಗುವಳಿಗೆ ಅವಕಾಶ ನೀಡುತ್ತಿಲ್ಲ. ಸುಳ್ಳು ಕೇಸ್ ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದರು.
ಮಿನಿ ವಿಧಾನಸೌಧದಲ್ಲಿ ಗುರುವಾರ ಎಸಿ ಡಾ. ಕೆ.ಜೆ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಉಪ ವಿಭಾಗೀಯ ಮಟ್ಟದ ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ವಿಷಯ ಕುರಿತು ಸುದೀರ್ಘ ಚರ್ಚೆ ನಡೆಸಿದ ಮುಖಂಡರು ಸಮಸ್ಯೆಗೆ ತಾರ್ಕಿಕ ಅಂತ್ಯಕಾಣಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆಯನ್ನು ಆಲಿಸಿದ ಡಾ. ಕೆ.ಜೆ.ಕಾಂತರಾಜ್, ಸರ್ಕಾರ ಭೂಮಿ ಮಂಜೂರು ಮಾಡಿರುವುದಲ್ಲದೆ, ಸ್ವಾಧೀನಾನುಭವದಲ್ಲಿರುವ ರೈತರಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆ ನೀಡಿದೆ. ಇದರ ಹೊರತಾಗಿಯೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತೊಂದರೆ ನೀಡುವುದು ತಪ್ಪು. ಆಯಾ ವೃತ್ತದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ರೈತರಿಗೆ ತೊಂದರೆ ಕೊಡದಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಎನ್.ಆರ್.ಪುರ ದಲಿತ ಸಂಘರ್ಷ ಸಮಿತಿ ಮುಖಂಡ ರಾಮು ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅನಾದಿಕಾಲದಿಂದ ಮನೆ ನಿರ್ಮಿಸಿಕೊಂಡಿರುವ ದಲಿತರಿಗೆ 94 ಸಿ, 94 ಸಿಸಿ ಅಡಿ ಹಕ್ಕುಪತ್ರ ನೀಡಿಲ್ಲ. ಇದರಿಂದ ಬ್ಯಾಂಕ್‌ನಿಂದ ಸಾಲ ಸೌಲಭ್ಯ, ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವಿಷಯ ಅನೇಕ ಸಭೆಗಳಲ್ಲಿ ಪ್ರಸ್ತಾಪಿಸಿದರೂ ಪರಿಹಾರ ಮಾತ್ರ ಸಿಗುತ್ತಿಲ್ಲ ಎಂದರು.
ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಈ ವಿಷಯ ಕಳೆದ ಸಭೆಯಲ್ಲೂ ಪ್ರಸ್ತಾಪವಾಗಿರುವುದು ಗಮನದಲ್ಲಿದೆ. ದಲಿತರ ಮನೆ ಜಾಗ ಪರಿಶೀಲಿಸಿ ಸಮಸ್ಯೆಗೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು ಎಂದು ತಹಸೀಲ್ದಾರ್ ಹಾಗೂ ತಾಪಂ ಇಒಗೆ ನಿರ್ದೇಶನ ನೀಡಿದರು.
ಡಿಎಸ್‌ಎಸ್ ವಿಭಾಗೀಯ ಸಂಚಾಲಕ ಎಚ್.ವಿ.ಬಾಲರಾಜ್ ಮಾತನಾಡಿ, ಹಾದಿಕೆರೆ ಗ್ರಾಮ ನಿರ್ಮಾಣಕ್ಕೆ ದಾನಿಗಳು ಜಮೀನು ನೀಡಿದ್ದರೂ ಕಂದಾಯ ಇಲಾಖೆ ಸೂಕ್ತ ದಾಖಲೆ ತಯಾರಿಸಿಕೊಡಲು ಮೀನಮೇಷ ಎಣಿಸುತ್ತಿದೆ. ಇದರಿಂದ ಮನೆಗಳಿಗೆ ಹಕ್ಕುಪತ್ರ ಇಲ್ಲದಂತಾಗಿದೆ ಎಂದು ದೂರಿದರು.
ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಕಂದಾಯ ಇಲಾಖೆ ಹಾಗೂ ಭೂ ದಾಖಲೆಗಳ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ತರೀಕೆರೆ ಸಹಾಯಕ ನಿರ್ದೇಶಕ ಮಂಜುನಾಥ್, ಕಡೂರು ಸಹಾಯಕ ನಿರ್ದೇಶಕ ರೇವಣ್ಣ, ಎಸ್ಸಿ, ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಗುಳ್ಳದಮನೆ ನಾಗರಾಜ್ ಇತರರಿದ್ದರು.
ಬಹುತೇಕ ಗ್ರಾಮಗಳಲ್ಲಿ ಸರ್ಕಾರ ಸ್ಮಶಾನಕ್ಕೆ ಕಾಯ್ದಿರಿಸಿರುವ ಜಾಗ ಪ್ರಭಾವಿಗಳ ಪಾಲಾಗಿದೆ. ಇದರಿಂದ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದ್ದು, ಕಾಯ್ದಿರಿಸಿರುವ ಜಾಗ ಗುರುತಿಸಿ ಅತಿಕ್ರಮಣ ತಪ್ಪಿಸಬೇಕು ಎಂದು ದಲಿತ ಮುಖಂಡ ಜಿ.ಟಿ.ರಮೇಶ್ ಮನವಿ ಮಾಡಿದರು. ಡಾ. ಕೆ.ಜೆ.ಕಾಂತರಾಜ್ ಮಾತನಾಡಿ, ಸ್ಮಶಾನ ಜಾಗದ ಸಮಸ್ಯೆ ಇರುವಲ್ಲಿಗೆ ಸಿಬ್ಬಂದಿ ಕಳುಹಿಸಿ ಪರಿಶೀಲಿಸಲಾಗುವುದು. ಅತಿಕ್ರಮಣವಾಗಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದರು.