ಬೀಡಾಡಿ ಜಾನುವಾರುಗಳಿಂದ ಹೈರಾಣ

januvaru
Published on

ನರಸಿಂಹ ನಾಯಕ್ ಬೈಂದೂರು

ಬೈಂದೂರು ವ್ಯಾಪ್ತಿಯಲ್ಲಿ ಕೊಲ್ಲೂರು ದೇವಳದ ಗೋಶಾಲೆ ಹೊರತುಪಡಿಸಿ ಬೇರೆ ಯಾವುದೇ ಗೋಶಾಲೆ ಇಲ್ಲದ ಹಿನ್ನೆಲೆಯಲ್ಲಿ ಬೀಡಾಡಿ ಜಾನುವಾರುಗಳ ಸಂಖ್ಯೆ ಅಧಿಕವಾಗುತ್ತಿದೆ. ಇವುಗಳು ಕೃಷಿ ಭೂಮಿಗೆ ನುಗ್ಗಿ ಕೃಷಿಕರ ಬೆಳೆ ಹಾನಿ ಮಾಡುವುದಲ್ಲದೇ ಪಾದಚಾರಿಗಳು, ದ್ವಿಚಕ್ರ ಸವಾರರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಶಿರೂರು ಮಾರ್ಕೆಟ್, ಪೇಟೆ, ವತ್ತಿನೆಣೆ ತಿರುವು, ಹೊಸ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಬಳಿ, ಸೇನೇಶ್ವರ ದೇವಸ್ಥಾನದ ಆವರಣ, ಯಡ್ತರೆ ವೃತ್ತ, ಬಿಜೂರು, ಉಪ್ಪುಂದ, ಕಂಬದಕೋಣೆ, ನಾಗೂರು, ಅರೆಹೊಳೆ ಬೈಪಾಸ್, ನಾವುಂದ, ಕಿರಿಮಂಜೇಶ್ವರ, ಮರವಂತೆ, ತ್ರಾಸಿ ಸೇರಿದಂತೆ ಬೈಂದೂರು ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳಿಂದ ತುಂಬಿಹೋಗಿದ್ದು, ಜನತೆಗೆ ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ.

ಕೆಲವೊಮ್ಮೆ ಇವುಗಳ ಉಪಟಳ ಹೇಳ ತೀರದಂತಾಗಿದ್ದು, ಸಂತೆಯಲ್ಲಿ ಮಹಿಳೆಯರು, ಮಕ್ಕಳು ಇವುಗಳಿಂದ ತಪ್ಪಿಸಿಕೊಂಡು ಸಂತೆ ವ್ಯವಹಾರ ನಡೆಸುವುದೇ ಸವಾಲು. ಇದಿಷ್ಟೇ ಅಲ್ಲ ಬಿಡಾಡಿ ದನಗಳು ಹಿಂಡು ಹಿಂಡಾಗಿ ರಸ್ತೆ ಮಧ್ಯೆ ಮಲಗುವುದರಿಂದ ಸಂಚಾರ ಕಠಿಣವಾಗಿದೆ. ಇವುಗಳ ಕಾಟದಿಂದ ಈಗಾಗಲೇ ಹಲವರು ರಸ್ತೆಯಲ್ಲಿ ಬಿದ್ದು ಗಾಯಗೊಂಡ ಪ್ರಕರಣಗಳು ನಡೆದಿವೆ.

ಈಗಾಗಲೇ ಅಶಕ್ತ ಹಾಗೂ ಅಪಘಾತ ಸಂಭವಿಸಿದ ಗೋವುಗಳನ್ನು ಬೈಂದೂರು ಯಡ್ತರೆಯ ಗ್ಯಾರೇಜ್ ಮಾಲೀಕ ಸಂಜೀವ ದೇವಾಡಿಗರ ಪುಣ್ಯಕೋಟಿ ಧಾಮ ಹಾಗೂ ವಸ್ರೆಯ ಗಂಟಿಧಾಮ ಗೋವು ಆರೈಕೆ ಕೇಂದ್ರ ತೆರೆಯಲಾಗಿದೆ. ಆದರೆ ಸೀಮಿತ ಗೋವುಗಳಿಗಷ್ಟೇ ಅವಕಾಶಗಳಿರುವ ಈ ಸ್ಥಳಗಳಲ್ಲಿ ಹೆಚ್ಚಿನ ಗೋವುಗಳ ಆರೈಕೆಗೆ ಮೂಲಸೌಕರ್ಯ ಇಲ್ಲವಾಗಿದೆ.

ಹೆದ್ದಾರಿ ಸಂಚಾರ ದುಸ್ತರ

ಈ ಭಾಗದಲ್ಲಿ ರಾತ್ರಿ ವೇಳೆ ಹೆದ್ದಾರಿ ಸಂಚಾರಿ ಸಂಚಾರ ಅಪಾಯಕಾರಿಯಾಗಿದೆ. ಹೆದ್ದಾರಿ ಬದಿ ಮಲಗಿರುವ ದನಗಳು ವಾಹನಗಳ ಶಬ್ದ ಕೇಳುತ್ತಿದ್ದಂತೆ ದಿಕ್ಕುದೆಸೆಯಿಲ್ಲದೇ ಓಡಾಡುತ್ತವೆ. ಆಗ ಅಪಘಾತವಾಗುವ ಸಾಧ್ಯತೆ ಹೆಚ್ಚು. ಬೀಡಾಡಿ ದನಗಳಿಂದ ದ್ವಿಚಕ್ರ ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರಿ ವಾಹನಗಳಿಂದ ಅಪಘಾತಗೊಂಡು ಹಲವಾರು ಗೋವುಗಳು ಸಾವಿಗೀಡಾಗುತ್ತಿವೆ ಎಂದು ಹೈವೆ ಪೆಟ್ರೋಲಿಂಗ್ ಟೀಮ್‌ನ ಗಣೇಶ್ ಹೇಳುತ್ತಾರೆ.

ಬೈಂದೂರು ಕ್ಷೇತ್ರದಲ್ಲಿ ದಾಖಲೆಗಳ ಪ್ರಕಾರ 846 ಎಕರೆ ಗೋಮಾಳ ಜಾಗ ಇದ್ದು. ಸುಸಜ್ಜಿತ ಗೋಶಾಲೆ ನಿರ್ಮಾಣಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಹಿಂದುಗಳು ಗೋವುಗಳ ಮಹತ್ವ ಅರಿತು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಪ್ರತಿ ತಾಲೂಕಿನಲ್ಲೂ ಗೋಶಾಲೆ ನಿರ್ಮಾಣವಾಗಬೇಕು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಒಂದು ಗೋವನ್ನು ದತ್ತು ಪಡೆದರೆ ಗೋವುಗಳು ಅನಾಥವಾಗುವುದಿಲ್ಲ. ಗುರುರಾಜ್ ಗಂಟಿಹೊಳೆ ಶಾಸಕ https://www.vijayavani.net/rss-leader-joshi-vist-krishna-mutt https://www.vijayavani.net/inter-departmental-coordination-committee-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net