ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ದೌರ್ಜನ್ಯ

13 NMG 01 (3)
Published on

ನಾಗಮಂಗಲ: ಬಿತ್ತನೆ ಮಾಡಲಾಗಿದ್ದ ಕಲ್ಲಂಗಡಿಗಳನ್ನು ಮೊಳಕೆಯೊಡೆಯುವ ಮುನ್ನವೇ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಒತ್ತುವರಿ ತೆರವು ನೆಪದಲ್ಲಿ ಜೆಸಿಬಿ ಮೂಲಕ ಬುಧವಾರ ರಾತ್ರಿ ನಾಶಪಡಿಸಿದ್ದಾರೆ. ಇದರಿಂದ ಹತಾಶರಾಗಿರುವ ರೈತನ ಕುಟುಂಬ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ ನೀಡಿದೆ.

ತಾಲೂಕಿನ ದೇವಲಾಪುರ ಹೋಬಳಿ, ಮಲ್ಲಸಂದ್ರ ಕಾವಲ್ ಸರ್ವೇ ನಂ. 11/1 ರ 5 ಎಕರೆ ವಿಸ್ತೀರ್ಣದ ಭೂಮಿಯಲ್ಲಿ (1927) ನೂರಾರು ವರ್ಷಗಳಿಂದ ರೈತ ಕುಮಾರ್ ಅವರ ಕುಟುಂಬದವರು ಸಾಗುವಳಿ ಮಾಡುತ್ತಿದೆ. ಆದರೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ 5 ಎಕರೆ ಜಮೀನಿನ ಸುತ್ತ ನಿರ್ಮಿಸಿದ್ದ ತಂತಿ ಬೇಲಿ ಕಾಂಪೌಂಡ್ ಮತ್ತು ಹನಿ ನೀರಾವರಿಗೆ ಅಳವಡಿಸಲಾಗಿದ್ದ ಪೈಪ್‌ಗಳನ್ನು ಧ್ವಂಸ ಮಾಡಿ ಕಲ್ಲಂಗಡಿ ಬೆಳೆಯನ್ನು ನಾಶ ಮಾಡಿದ್ದಾರೆ.

ರೈತನ ಪರವಾಗಿ ಇಡೀ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ನೀಡಿದ್ದ ದೂರಿನನ್ವಯ ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಕುಂಞ ಅಹಮ್ಮದ್, ಈ ಸ್ಥಳದಲ್ಲಿ ಅರಣ್ಯ, ತೋಟಗಾರಿಕೆಗೆ ಮತ್ತು ಗೋಮಾಳಗಳ ಭೂಮಿ ಇದೆ. 3 ಗ್ರಾಮಗಳ ಗಡಿ ಇಲ್ಲಿಯೇ ಸಂಗಮವಾಗುತ್ತದೆ. ಗೋಮಾಳದ ವಿಸ್ತೀರ್ಣದ ಪಹಣಿಗೂ ಮತ್ತು ಆಕಾರಬಂದ್‌ಗೂ ತಾಳೆ ಇದೆ. ನೊಂದ ರೈತರ ಭೂಮಿಯೂ ಇದೆ. ಆದರೆ ಯಾರ ಜಾಗ ಎಲ್ಲಿದೆ ಎಂಬುದನ್ನು ಗುರುತು ಮಾಡಬೇಕಿದೆ. ಆದರೂ ನಮ್ಮ ಗಮನಕ್ಕೆ ತರದೆ ಏಕಾಏಕಿ ರೈತನ ಬೆಳೆ ಸೇರಿದಂತೆ ತಂತಿ ಬೇಲಿ ಮತ್ತು ಹನಿ ನೀರಾವರಿಯ ಪರಿಕರಗಳನ್ನು ನಾಶಪಡಿಸಲಾಗಿದೆ ಎಂದು ದೂರಿದರು.

ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು. ರೈತನಿಗಾಗಿರುವ ನಷ್ಟವನ್ನು ಸಂಬಂಧಿಸಿದವರಿಂದ ಭರಿಸಿಕೊಡಲಾಗುವುದು ಎಂದು ಭರವಸೆ ನೀಡುವ ಮೂಲಕ ಗ್ರಾಮಸ್ಥರಿಗೆ ಮತ್ತು ನೊಂದ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕಾಲಿಗೆ ಬಿದ್ದ ರೈತ ಮಹಿಳೆ: ನಮಗೆ ನ್ಯಾಯ ಕೊಡಿ, ನಮ್ಮನ್ನು ಬೀದಿ ಪಾಲು ಮಾಡಬೇಡಿ, ನಾವು ಹಲವು ವರ್ಷಗಳಿಂದಲ್ಲೂ ಇಲ್ಲಿಯೇ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದೇವೆ ಎಂದು ರೈತ ಕುಮಾರ್ ಪತ್ನಿ ಆಶಾ, ತಹಸೀಲ್ದಾರ್ ಅಹಮ್ಮದ್ ಕಾಲಿಗೆ ಬಿದ್ದರು. ಕ್ಷಣ ಕಾಲ ತಹಸೀಲ್ದಾರ್ ಭಾವುಕರಾದರು.

1915 ರಲ್ಲಿ ಸರ್ಕಾರದಿಂದ ನಿಯಮಾನುಸಾರ ಮಂಜೂರಾಗಿರುವ ಗೋಮಾಳದ ಜಮೀನು, 1927ರಲ್ಲಿ ನನ್ನ ತಾತನಿಗೆ ಕ್ರಯವಾಗಿದೆ. ಅಂದಿನಿಂದ ಇಂದಿನವರೆಗೂ ಪಹಣಿ ನಿಯಮಾನುಸಾರ ನಮ್ಮ ತಂದೆಯ ಹೆಸರಿನಲ್ಲಿ ಬರುತ್ತಿದೆ. ಸರ್ಕಾರಕ್ಕೆ ಪಾವತಿಸುವ ಕಂದಾಯವನ್ನು ಸಂದಾಯ ಮಾಡುತ್ತಿದ್ದೇವೆ. ನಮಗೆ ಯಾವುದೇ ಮಾಹಿತಿ ನೀಡದೆ ಬೆಳೆ ನಾಶ ಮಾಡಿರುವ ಮಲ್ಲಸಂದ್ರ ಕಾವಲ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ಮತ್ತು ತೋಟಗಾರಿಕೆ ಸಹಾಯಕ ಪುಟ್ಟಸ್ವಾಮಾಚಾರ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೊಂದ ರೈತ ಕುಮಾರ್‌ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net