

ಪ್ರತಾಪ್ ಸಿಂಹ ಹಿಟ್ ಆ್ಯಂಡ್ ರನ್ ರಾಜಕಾರಣಿ. ಸಿದ್ದರಾಮಯ್ಯ ಕೊಡುಗೆ ಏನೆಂದು ಪ್ರಶ್ನೆ ಮಾಡಿದ್ದಾರೆ. ಮೈಸೂರು ನಗರಕ್ಕೆ ಸಿದ್ದರಾಮಯ್ಯ 3,800 ಕೋಟಿ ರೂ. ಅನುದಾನ ನೀಡಿದ್ದಾರೆ. ಜಿಲ್ಲೆಗೆ 22,000 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದು ಎಂ.ಲಕ್ಷ್ಮಣ್ ಹೇಳಿದರು.
ಒಬ್ಬ ನಗರಪಾಲಿಕೆ ಸದಸ್ಯ ಮಾಡಿದ ಕೆಲಸವನ್ನು ತಾನೇ ಮಾಡಿದ್ದೆಂದು ಹೇಳಿಕೊಳ್ಳುತ್ತಾರೆ. ಪಾಲಿಕೆ ವ್ಯಾಪ್ತಿಯ ಯೋಜನೆಗಳನ್ನು ತಂದಿದ್ದು ನಾನೇ ಎನ್ನುತ್ತಾರೆ. ವರ್ತುಲ ರಸ್ತೆ ಆಗಿದ್ದು ಎಡಿಬಿ ಸಾಲದಿಂದ. ವಿದ್ಯುತ್ ದೀಪ ಅಳವಡಿಕೆ ಕ್ರೆಡಿಟ್ ಅವರಿಗೆ ಸಿಗಬೇಕು. ನಿಮಗೆ ಯಾವ ರೀತಿ ಹೇಳಿದರೆ ಅರ್ಥವಾಗುತ್ತದೆ ಎಂದು ಕುಟುಕಿದರು.
2024ರ ಚುನಾವಣೆ ಹತ್ತಿರವಾದಾಗ ಪ್ರತಾಪಸಿಂಹ ಅವರಿಗೆ ಗ್ರೇಟರ್ ಮೈಸೂರು ನೆನಪಾಗಿದೆ. ಪ್ರತಾಪಸಿಂಹ ಅವರ ತ್ರಿಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೂ ಪ್ರಯತ್ನವನ್ನೇ ಮಾಡಲಿಲ್ಲ. ಸುಳ್ಳು ಹೇಳಿಕೊಂಡು ತಿರುಗುವುದೇ ಆಯಿತು. ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. 2024ರಲ್ಲಿ ಮೈಸೂರು ಜನತೆ ನಿಮ್ಮನ್ನು ತಿರಸ್ಕರಿಸುವುದು ನೂರಕ್ಕೆ ನೂರು ಸತ್ಯ ಎಂದರು.
ಮೂರು ದಿನದ ಹಿಂದೆಯೇ ಚರ್ಚೆ ಸಂಬಂಧ ಪತ್ರ ಬರೆದಿದ್ದೇವೆ. ನಿಮ್ಮ ಕಚೇರಿ ಸಿಬ್ಬಂದಿ ನಮ್ಮ ಪತ್ರ ಪಡೆದು, ಚರ್ಚೆಗೆ ಬರಬಹುದೆಂದು ಸಹಿ ಹಾಕಿದ್ದಾರೆ. ಈಗ ಮೈಸೂರಿನಲ್ಲೇ ಇದ್ದರೂ ಏಕೆ ಕಚೇರಿಗೆ ಬಂದಿಲ್ಲ ಎಂದು ಪ್ರಶ್ನಿಸಿದ ಅವರು, ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಜನ ಮನೆಗೆ ಕಳುಹಿಸುತ್ತಾರೆ ಎಂದರು.