

ಪುತ್ತೂರು: ಮಂಗಳೂರಿನಿಂದ ಆಗಮಿಸುತ್ತಿದ್ದ ವೇಗದೂತ ಬಸ್ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಹಿಡಿದು ಮಹಿಳಾ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ.
ಮಂಗಳೂರು ಬಂದರು ನಿವಾಸಿ ಮಹಮ್ಮದ್ ತೌಹೀದ್ (೨೫) ಬಂಧಿತ. ಪುತ್ತೂರಿನಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದಾನೆಂದು ಹೇಳಲಾಗಿದೆ. ನಿಗದಿತ ನಿಲುಗಡೆಯಾದ ಕಾರಣ ಬಸ್ನಲ್ಲಿ ನಿರ್ವಾಹಕರಿಲ್ಲದುದನ್ನು ದುರುಪಯೋಗ ಪಡಿಸಿಕೊಂಡಿದ್ದು, ನಿರಂತರ ಕಿರುಕುಳದಿಂದ ನೊಂದ ಯುವತಿಗೆ ವಿಚಾರವನ್ನು ದೂರವಾಣಿ ಮೂಲಕ ಪುತ್ತೂರಿನಲ್ಲಿರುವವರಿಗೆ ತಿಳಿಸಿದ್ದಾಳೆ. ವಿಚಾರ ತಿಳಿದ ತಂಡ ಬಸ್ ನಿಲ್ದಾಣಕ್ಕೆ ಬರುವುದನ್ನು ಕಾದು ಕುಳಿತಿದೆ.
ಪರಿಸ್ಥಿತಿಯನ್ನು ಅರಿತ ಆರೋಪಿ ತುರ್ತು ನಿರ್ಗಮನ ಬಾಗಿಲು ಮೂಲಕ ಪಲಾಯನ ಮಾಡಿ ಅಂಗಡಿಯಲ್ಲಿ ಕೂತಿದ್ದಾನೆ. ಸಾರ್ವಜನಿಕರು ಗುರುತು ಪತ್ತೆ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇನ್ನೊಂದು ತಂಡದಿಂದ ತೀವ್ರ ವಿರೋಧ!
ಬಸ್ ನಿಲ್ದಾಣದ ಮುಂದೆ ಆರೋಪಿತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸುವುದಕ್ಕೆ ಮುಂದಾದ ಸಂದರ್ಭ ಇನ್ನೊಂದು ತಂಡ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಲೇ ಹಿಂದು ಸಂಘಟನೆ ನಾಯಕರು ಠಾಣೆಗೆ ಧಾವಿಸಿದ್ದಾರೆ.