ಪ್ರೀತಿಯಿಂದ ಕರ್ತವ್ಯನಿರ್ವಹಿಸಿ

Harapanahalali Teacher
ಹರಪನಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಬಿಇಒ ಲೇಪಾಕ್ಷಪ್ಪ ಹಾಗೂ ಎಸಿ ಚಿದಾನಂದ ಗುರುಸ್ವಾಮಿ ಉದ್ಘಾಟಿಸಿದರು. ಪ್ರಮುಖರಾದ ಜಿ.ಪದ್ಮಲತಾ, ಬಸವರಾಜ ಸಂಗಪ್ಪನವರ್, ಎನ್.ಜಿ.ಮನೋಹರ್, ಎಂ.ಆಂಜನೇಯ, ಎಂ.ವಿ. ಅಂಜಿನಪ್ಪ, ಕೆ.ನಾಗರಾಜ, ಕೆ.ಷಣ್ಮುಖಪ್ಪ, ಎಸ್.ಹೊನ್ನತ್ತೆಪ್ಪ, ಬಿ.ಚಂದ್ರಮೌಳಿ, ಬಿ.ರಾಜಶೇಖರ, ಗಿರಜ್ಜಿ ಮಂಜುನಾಥ ಇತರರಿದ್ದರು.
Published on

ಹರಪನಹಳ್ಳಿ: ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ತತ್ವ ಶಾಸ್ತ್ರಜ್ಞರಾಗಿ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಬಿಇಒ ಲೇಪಾಕ್ಷಪ್ಪ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ 392 ಶಾಲೆಗಳಿದ್ದು, ಶಿಕ್ಷಕರ ಕೊರತೆ ಇರುವಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ 158 ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರೌಢಶಾಲೆಗೆ 32 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಗುಣಾತ್ಮಕ ಶಿಕ್ಷಣ ನಮ್ಮ ಗುರಿಯಾಗಿದೆ. ಶಿಕ್ಷಕರು ವೃತ್ತಿಯನ್ನು ಪ್ರೀತಿಯಿಂದ ನಿರ್ವಹಿಸಬೇಕು ಎಂದರು.

ತಾಪಂ ಇಒ ವೈ.ಎಚ್.ಚಂದ್ರಶೇಖರ್ ಮಾತನಾಡಿ, ಮಕ್ಕಳಲ್ಲಿ ಗುಣಾತ್ಮಕ ವೈಚಾರಿಕ ಪ್ರಜ್ಞೆ ಮೂಡಿಸಲು ಶಿಕ್ಷಕರು ನಿರಂತರ ಕಲಿಕಾಭ್ಯಾಸ ಮಾಡಬೇಕಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸ್ವರ ವ್ಯಂಜನಗಳನ್ನು ಪರಿಚಯಿಸಬೇಕು. ಅವರಲ್ಲಿ ಅಡಗಿರುವ ಸುಪ್ತ ಮನಸ್ಸನ್ನು ಹೊರ ತೆಗೆದು ಅವರ ಬಾಳಿಗೆ ಬೆಳಕನ್ನು ನೀಡುವುದು ಶಿಕ್ಷಕನ ಕರ್ತವ್ಯ ಎಂದ ಅವರು, ಶಾಲಾ ಕೊಠಡಿಗಳು, ಶೌಚಗೃಹಗಳು, ಶಿಥಿಲಾವಸ್ಥೆಗೆ ಬರುವ ಮುನ್ನವೇ ಗಮನಕ್ಕೆ ತಂದರೆ ಸರಿಪಡಿಸುತ್ತೇವೆ ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಎಸಿ ಚಿದಾನಂದ ಗುರುಸ್ವಾಮಿ ಮಾತನಾಡಿದರು. ನಿವೃತ್ತ ಶಿಕ್ಷಕರು ಹಾಗೂ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಮುಖರಾದ ಅರ್ಜುನ್ ಪರುಸಪ್ಪ, ಜಯಣ್ಣ ಪೂಜಾರ್, ಪಿ.ಸುಬ್ಬಣ್ಣ, ಎಂ.ರಮೇಶ, ಟಿ.ಎಚ್.ಎಂ. ಲತಾ, ಬಿ.ಗುರುಮೂರ್ತಿ, ರುದ್ರೇಶ್ ಬಡಿಗೇರ, ಅನಂತನಾಯ್ಕ, ಶಿವಾಜಿ ನಾಯ್ಕ, ಎಸ್.ಎಂ.ಕೊಟ್ರಯ್ಯ, ಎಚ್.ಕೆ.ಚಂದ್ರಪ್ಪ, ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net