

ಹರಪನಹಳ್ಳಿ: ಭಾರತೀಯ ಸಂಸ್ಕೃತಿಗೆ ಮಹರ್ಷಿ ವಾಲ್ಮೀಕಿ ಅವರು ಮಾನವ ಸಂಬಂಧಗಳ ಸಂದೇಶ ಸಾರಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ರಾಮಾಯಣದಂತಹ ಮಹಾಕಾವ್ಯ ರಚಿಸಿ ಇಡೀ ಜಗತ್ತಿನಲ್ಲಿ ಮೊಟ್ಟ ಮೊದಲ ಪ್ರತಿಭೆ ಎನಿಸಿಕೊಂಡರು. ಆದರೆ, ಅವರಿಗೆ ತಕ್ಕ ಪುರಸ್ಕಾರ ದೊರೆಯದಿರುವುದು ಶೋಚನೀಯ. ಪ್ರತಿಭೆ ಸಾಧಕನ ಸ್ವತ್ತು. ಮಕ್ಕಳು ಸಮಯ ಪ್ರಜ್ಞೆ, ಕಠಿಣ ಪರಿಶ್ರಮ, ಉನ್ನತ ಗುರಿಯೊಂದಿಗೆ ಮುಂದೆ ಸಾಗಬೇಕೆಂದು ತಿಳಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ವಿದ್ಯಾರ್ಥಿಗಳು ಏಕಲವ್ಯನ ಹಾಗೆ ಗುರಿ ಹೊಂದಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪಾಳಕರು ಮಕ್ಕಳ ಮೇಲೆ ಒತ್ತಡ ಹಾಕದೆ ಅವರಿಷ್ಟದಂತೆ ಓದಲು ಬಿಡಬೇಕು. ಮಕ್ಕಳು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಮಾತನಾಡಿ, ಶತ ಶತಮಾನಗಳಿಂದ ಶೋಷಣೆಗೆ ಒಳಗಾಗದ ವಾಲ್ಮೀಕಿ ಸಮುದಾಯ ಇತ್ತೀಚೆಗೆ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಸಂತಸಪಡುವ ವಿಚಾರ ಎಂದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾತನಾಡಿ, ಇತ್ತೀಚೆಗೆ ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡಬೇಕು ಎಂದರು. ಎಂಬಿಬಿಎಸ್ ಪ್ರವೇಶ ಪಡೆದ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಇಲಾಖೆಯಲ್ಲಿ ಉನ್ನತ ಹುದ್ದೆಯಲಿರುವ ವಾಲ್ಮೀಕಿ ಸಮುದಾಯದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಹೊಸಪೇಟೆ ಡಿವೈಎಸ್ಪಿ ಟಿ.ಮಂಜುನಾಥ, ಹೊಸಪೇಟೆ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ವಕೀಲ ಬಸವರಾಜ ಸಂಗಪ್ಪನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ವೈ.ಡಿ.ಅಣ್ಣಪ್ಪ, ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ನಾಗಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಎಚ್.ಟಿ.ವನಜಾಕ್ಷಿ, ಪಿಎಸ್‌ಐ ನಾಗರತ್ನ, ಸಹಾಯಕ ಪ್ರಾಧ್ಯಾಪಕ ಬುಳ್ಳಪ್ಪ, ಪ್ರಮುಖರಾದ ಪದ್ಮಲತಾ, ಪದ್ಮರಾಜ ಜೈನ್, ಬಂದೋಳ ಸಿದ್ದಪ್ಪ, ಆರ್.ಲೋಕೇಶ್, ಹಲುವಾಗಲು ಗಿರೀಶಪ್ಪ, ನೀಲಗುಂದ ವಾಗೀಶ, ಆಲದಹಳ್ಳಿ ಷಣ್ಮುಖಪ್ಪ, ಸಂತೋಷ, ನಾಗರಾಜ, ಎಚ್.ಕೆ.ನಾಗರಾಜ, ತಳವಾರ ಮಂಜಪ್ಪ, ತಿಪ್ಪೇಸ್ವಾಮಿ, ಪರಶುರಾಮಪ್ಪ ಇತರರಿದ್ದರು.