ಹರಪನಹಳ್ಳಿ ಪಟ್ಟಣ ಅಭಿವೃದ್ಧಿಗೆ ಶ್ರಮಿಸಿ

Harapanahalli Purasabhe
ಹರಪನಹಳ್ಳಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಫಾತೀಮಾ ಬಿ, ಉಪಾಧ್ಯಕ್ಷ ಎಚ್.ಕೊಟ್ರೇಶ್, ಸ್ಥಾಯಿ ಸಮಿತಿ ಸದಸ್ಯರಾದ ಗೊಂಗಡಿ ನಾಗರಾಜ್, ಜಾಕೀರ್ ಹುಸೇನ್, ಲಾಟಿ ದಾದಾಪೀರ್, ಅಬ್ದುಲ್ ರೆಹಮಾನ್ ಸಾಬ್, ಉದ್ದಾರ್ ಗಣೇಶ್, ತಾರಾ ಹನುಮಂತಪ್ಪ ಇತರರಿದ್ದರು.
Published on

ಹರಪನಹಳ್ಳಿ: ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಳಿದ ಅಲ್ಪ ಅವಧಿಯನ್ನು ಪಟ್ಟಣದಲ್ಲಿ ಜನರ ಸಮಸ್ಯೆಗಳನ್ನು ಅರಿತು ಪ್ರತಿಯೊಬ್ಬ ಸದಸ್ಯ ನಿಷ್ಠೆ, ಪ್ರಾಮಾಣಿಕೆಯಿಂದ ಅಭಿವೃದ್ಧಿ ಪಡಿಸುವ ಕಡೆಗೆ ಗಮನಹರಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ನಮ್ಮ ಪಕ್ಷದವರೇ ಆದ ಪುರಸಭೆ ಸದಸ್ಯ ವೆಂಕಟೇಶ್ ವಕೀಲರು ಸಾಮಾನ್ಯ ಮೀಸಲಾತಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಇದರಲ್ಲಿ ದುರುದ್ದೇಶವಿರಲಿಲ್ಲ. ಆದರೆ, ನಮ್ಮ ಸಮಾಜಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮುಸ್ಲಿಮರು ಬೇಸರ ವ್ಯಕ್ತಪಡಿಸಿದ್ದರು. ಶಾಸಕರಿಗೆ ಯಾವುದೇ ಜಾತಿ-ಭೇದವಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡು ಸಾಮಾಜಿಕ ನ್ಯಾಯ ಒದಗಿಸಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಟಿ.ವೆಂಕಟೇಶ ವಕೀಲರು ಹಾಗೂ ಸದಸ್ಯರಾಗಿ ಗೊಂಗಡಿ ನಾಗರಾಜ್, ಜಾಕೀರ್ ಹುಸೇನ್, ಲಾಟಿ ದಾದಾಪೀರ್, ಅಬ್ದುಲ್ ರೆಹಮಾನ್ ಸಾಬ್, ಉದ್ದಾರ್ ಗಣೇಶ್, ತಾರಾ ಹನುಮಂತಪ್ಪ ಆಯ್ಕೆಯಾದರು. ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪುರಸಭೆ ಸದಸ್ಯರಾದ ಹರಾಳು ಅಶೋಕ್, ಇಜಂತ್ಕರ್ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net