ಹರಪನಹಳ್ಳಿಯಲ್ಲಿ ಧಾರಾಕಾರ ಮಳೆಗೆ ಬೆಳೆ ಜಲಾವೃತ: ಮೆಕ್ಕೆಜೋಳ, ಅಡಕೆ, ಚೆಂಡು ಹೂ ಬೆಳೆದ ರೈತರಿಗೆ ಅಪಾರ ನಷ್ಟ

18072021 Harapanahalli Rain
Published on


ಹರಪನಹಳ್ಳಿ: ತಾಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದ ವಿವಿಧ ಗ್ರಾಮಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ. ಫಣಿಯಾಪುರದಲ್ಲಿ ಮೇಕೆ ಶೆಡ್‌ನಲ್ಲಿದ್ದ ಒಂಬತ್ತು ಮೇಕೆಗಳು ಕೊಚ್ಚಿ ಹೋಗಿವೆ.

ಶನಿವಾರ ರಾತ್ರಿ ಮೂರು ಗಂಟೆಗೂ ಹೆಚ್ಚು ಹೊತ್ತು ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಉಚ್ಚಂಗಿದುರ್ಗ, ಚಟ್ನಿಹಳ್ಳಿ ಕೆರೆ ತುಂಬಿ ಕೋಡಿ ಹರಿದಿದೆ. ಹಿರೇಮೇಗಳಗೇರಿ, ಯು.ಬೇವಿನಹಳ್ಳಿ, ರಾಮಘಟ್ಟ, ಕುರೆಮಾಗನಹಳ್ಳಿ, ಫಣಿಯಾಪುರ, ಕೆಂಚಾಪುರ ಸೇರಿದಂತೆ ಹಲವೆಡೆ ಚೆಕ್ ಡ್ಯಾಂಗಳು ಭರ್ತಿಯಾಗಿ ಮೆಕ್ಕೆಜೋಳದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಫಣಿಯಾಪುರ ಗ್ರಾಮದ ಕೆಂಚಪ್ಪ ಎಂಬುವವರ ಕುರಿ-ಮೇಕೆ ಶೆಡ್‌ಗೆ ನೀರು ನುಗ್ಗಿದ ಪರಿಣಾಮ 9 ಮೇಕೆಗಳು ಸತ್ತಿವೆ. ಬೇವಿನಹಳ್ಳಿ ದೊಡ್ಡತಾಂಡಾದ ಕೃಷ್ಣನಾಯ್ಕರ 3 ಎಕರೆ ಅಡಕೆ ಗಿಡಗಳು, ಚೆಂಡು ಹೂವು ಸಂಪೂರ್ಣ ಜಲಾವೃತಗೊಂಡಿದೆ. ರಾಮಘಟ್ಟದಿಂದ ದಾವಣಗೆರೆ ತಾಲೂಕಿನ ಅಣಜಿಗೆ ಸಂಪರ್ಕಿಸುವ ರಸ್ತೆ, ಸೇತುವೆ ತುಂಬಿ ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು.

ಬೈಕ್ ಸವಾರನ ರಕ್ಷಣೆ: ಅರಸೀಕೆರೆ ಹೋಬಳಿ ವ್ಯಾಪ್ತಿಯ ಮಾದಿಹಳ್ಳಿ ಬೂದಿಹಾಳ್ ಬಳಿ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮೇಲೆ ನೀರು ಹರಿದಿದೆ. ಇದರ ಮೇಲೆ ಸಂಚರಿಸುತ್ತಿದ್ದ ವೇಳೆ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋಗುತ್ತಿದ್ದ ಸವಾರ ಸಂತೋಷ್‌ರನ್ನು ಸ್ಥಳೀಯರೊಬ್ಬರು ರಕ್ಷಿಸಿದ್ದಾರೆ. ಹಳ್ಳದ ಮಧ್ಯದಲ್ಲಿ ಗಿಡ ಹಿಡಿದು ರಕ್ಷಣೆಗಾಗಿ ಕೂಗುತ್ತಿದ್ದ ಸಂತೋಷ್‌ರನನ್ನು ಕಂಡ ಬೂದಿಹಾಳ್ ಗ್ರಾಮದ ಮಹಾಂತೇಶ ಭರಮಪ್ಪ ಹಗ್ಗದ ಸಹಾಯದ ಮೂಲಕ ಈಜಿ ರಕ್ಷಣೆ ಮಾಡಿದ್ದು, ಆರೋಗ್ಯವಾಗಿದ್ದಾರೆ. ಮಹಾಂತೇಶ ಭರಮಪ್ಪ ಸಮಯ ಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಎಎಸ್‌ಐ ನಾಗರತ್ನ, ಅಗ್ನಿಶಾಮಕ ದಳದ ಸಿಬ್ಬಂದಿ ಮುನಿಸ್ವಾಮಿ, ಲಿಂಗರಾಜ್, ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net