ಉಪನ್ಯಾಸದ ಮೂಲಕ ಸಮಾಜದಲ್ಲಿ ಜಾಗೃತಿ ಸಂದೇಶ

hrp-1
ಹರಪನಹಳ್ಳಿ ತೆಗ್ಗಿನಮಠದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಸಮಾರೋಪ ಸಮಾರಂಭವನ್ನು ರಾಮಘಟ್ಟ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ತೆಗ್ಗಿನಮಠದ ಜ್ಞಾನಗಂಗೋತ್ರಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ಟಿ.ಎಂ.ಪ್ರತೀಕ್, ವರ್ತಕ ಪಿ.ಕೆ.ಎಂ.ನಾಗಲಿಂಗಯ್ಯ, ವಿದ್ಯುತ್ ಗುತ್ತಿಗೆದಾರ ಎ.ಕರಿಬಸವರಾಜ ಇತರರಿದ್ದರು.
Published on

ಹರಪನಹಳ್ಳಿ: ಪಾಲಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಮಹನೀಯರ ಗುಣಗಳನ್ನು ತಿಳಿಸುವ ಮೂಲಕ ಸಂಸ್ಕಾರ ಬೆಳೆಸಬೇಕು ಎಂದು ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೆಗ್ಗಿನಮಠದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರಾವಣ ಸಂಜೆಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಶ್ರೀ ಮಠದಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ವೈಚಾರಿಕ ಉಪನ್ಯಾಸ ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು.

ಹಾಗೆಯೇ ಹಿಂದುಳಿದ ಹರಪನಹಳ್ಳಿ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಡಾ.ಚಂದ್ರಮೌಳೇಶ್ವರ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಬಳ್ಳಾರಿ ಸಹಕಾರ ಸಂಘಗಳ ಉಪ ನಿಬಂಧಕ ಜಿ.ಎಂ.ವೀರಭದ್ರಯ್ಯ ಮಾತನಾಡಿ, ಹಿಂದು ಧರ್ಮದ ಪ್ರತೀಕವೇ ಶ್ರಾವಣ ಮಾಸ. ಇಂತಹ ಸಂದರ್ಭದಲ್ಲಿ ಶ್ರೀ ಮಠವು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಸುಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದರು.

ತೆಗ್ಗಿನಮಠ ಶಿಕ್ಷಣ ಮಹಾವಿದ್ಯಾಲಯದ ಡೀನ್ ಟಿ.ಎಂ.ರಾಜಶೇಖರ ಮಾತನಾಡಿ, ಮಠ-ಮಾನ್ಯಗಳು ಧರ್ಮ, ಸಂಸ್ಕೃತಿಯನ್ನು ಉಳಿಸುವ ಮಹತ್ಕಾರ್ಯವನ್ನು ಕೈಗೊಂಡಿವೆ. ಸನಾತನ ಧರ್ಮದ ಉಪದೇಶವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ರಾಮಘಟ್ಟ ಪುರವರ್ಗಮಠದ ರಾಜಗುರು ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ತೆಗ್ಗಿನಮಠದ ಕಾರ್ಯದರ್ಶಿ ಡಾ.ಟಿ.ಎಂ.ಚಂದ್ರಶೇಖರಯ್ಯ, ಆಡಿಟರ್ ಅಮೃತ ಮಂಜುನಾಥ ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ದತ್ತಾತ್ರೇಯ ಪೀಸೆ ಅವರು ನವಜಾತ ಶಿಶುಗಳ ನಿತ್ಯ ಆರೈಕೆ ಮತ್ತು ಆರೋಗ್ಯ ಕುರಿತು ಮಾಹಿತಿ ನೀಡಿದರು.

ಶ್ರೀಮಠದಿಂದ ಗಣ್ಯರನ್ನು ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕ ಶರಣಬಸಪ್ಪ, ಪತ್ರಕರ್ತರಾದ ತಳವಾರ ಚಂದ್ರಪ್ಪ, ಬಿ.ರಾಮಪ್ರಸಾದಗಾಂಧಿ, ಪ್ರಮುಖರಾದ ರಾಮಶಾಸ್ತ್ರಿ, ಮಹಾವೀರ ಭಂಡಾರಿ, ದೇವೇಶ, ಸಂಗೀತಾ ಮಂಜುನಾಥ, ಪ್ರಾಚಾರ್ಯ ಅರುಣಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net