

ಶುಲ್ಕ ಕಡಿಮೆ ಮಾಡುವಂತೆ ಪಾಲಕರು, ಮುಖಂಡರ ಒತ್ತಾಯ
ಹರಪನಹಳ್ಳಿ: ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಪ್ರಾಚಾರ್ಯರರ ಜತೆ ವಿವಿಧ ಸಂಘಟನೆಗಳ ಮುಖಂಡರು, ಪಾಲಕರು ಶುಕ್ರವಾರ ವಾಗ್ವಾದ ನಡೆಸಿದ್ದಾರೆ.
ಪಟ್ಟಣದ ಎಸ್‌ಯುಜೆಎಂ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವೀತಿಯ ಪಿಯು ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಿದೆ. ಕೊನೆಯ ದಿನವೆಂದು ದಾಖಲಾತಿ ಮಾಡಿಸಲು ಪಾಲಕರು, ವಿದ್ಯಾರ್ಥಿಗಳು ಮುಗಿಬಿದ್ದಿದ್ದರು. ಈ ವೇಳೆ ಹೆಚ್ಚಿನ ಶುಲ್ಕ ಪಡೆಯುತ್ತಿದ್ದು, ಕಡಿಮೆ ಮಾಡುವಂತೆ ಹಾಗೂ ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯುವಂತೆ ಪ್ರಾಚಾರ್ಯರ ಜತೆ ಪಾಲಕರು, ಮುಖಂಡರು ವಾಗ್ವಾದಕ್ಕಿಳಿದರು.
ಪ್ರಾಚಾರ್ಯ ಎಸ್.ಕೆ.ಹಿರೇಮಠ ಮಾತನಾಡಿ, ಸರ್ಕಾರ ನಿಗದಿಪಡಿಸಿದ ಶುಲ್ಕ ಪಡೆಯಲಾಗುತ್ತಿದೆ. ಆದರೂ, ಕೆಲವರು ಇನ್ನಷ್ಟು ಕಡಿಮೆ ಮಾಡಿ ಎಂದು ಒತ್ತಡ ತರುತ್ತಿದ್ದು, ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ದಾಖಲಾತಿಗೆ ಇನ್ನು ಐದು ದಿನಗಳು ಇದ್ದು, ಶುಲ್ಕ ಕಡಿಮೆ ಮಾಡುವ ಬಗ್ಗೆ ಆಡಳಿತ ಮಂಡಳಿ ಜತೆಗೆ ಚರ್ಚಿಸುವುದಾಗಿ ತಿಳಿಸಿದರು. ಮಧ್ಯಾಹ್ನದ ಬಳಿಕ ಸಮಸ್ಯೆಗೆ ಇತ್ಯರ್ಥಗೊಳಿಸಿ ದಾಖಲಾತಿ ಮಾಡಿಕೊಳ್ಳಲಾಯಿತು.
ಪುರಸಭೆ ಸದಸ್ಯ ಉದ್ದಾರ ಗಣೇಶ, ದಲಿತ ಸಂಘರ್ಷ ಸಮಿತಿ ಮುಖಂಡ ಯಲ್ಲಪ್ಪ, ಎನ್‌ಎಸ್‌ಯು ಜಿಲ್ಲಾಧ್ಯಕ್ಷ ಎಂ.ಡಿ.ಶ್ರೀಕಾಂತ, ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ವೆಂಕಟೇಶನಾಯ್ಕ, ರಮೇಶನಾಯ್ಕ, ಚಂದ್ರನಾಯ್ಕ ಇತರರು ಇದ್ದರು.