

ಹರಪನಹಳ್ಳಿ: ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕರ ಕುಟುಂಬಗಳಿಗೆ ನೆರವು ನೀಡುವ ಬಗ್ಗೆ ಪಿಯು ಕಾಲೇಜುಗಳ ಸಂಘ ತೀರ್ಮಾನಿಸಲಿದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಎಲ್ಲ ಉಪನ್ಯಾಸಕರ ಒಂದು ದಿನದ ವೇತನವನ್ನು ಆತ್ಮಹತ್ಯೆಗೆ ಶರಣಾದ ಉಪನ್ಯಾಸಕ ಕುಟುಂಬಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಜೊತೆಗೆ ಪದವಿ ಕಾಲೇಜಿನ ಅಧ್ಯಾಪಕರ ಸಂಘ, ಶಿಕ್ಷಕರ ಸಂಘ, ಅತಿಥಿ ಉಪನ್ಯಾಸಕರು ನೆರವಿಗೆ ಬರಬೇಕೆಂದು ತಿಳಿಸಿದರು.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷ ಎಚ್.ಕೊಟ್ರೇಶ್ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೊಳಗಾದ 412 ಸ.ಪ್ರ.ದರ್ಜೆ ಕಾಲೇಜುಗಳ 14564 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ತಿಂಗಳ ಮಾಹೆ 11ಸಾವಿರ ಹಾಗೂ 13ಸಾವಿರ ಕನಿಷ್ಠ ವೇತನವನ್ನು 8ರಿಂದ 9ತಿಂಗಳವರೆಗೆ ಬಿಡುಗಡೆಗೊಳಿಸುತ್ತಾರೆ. ಲಾಕ್‌ಡೌನ್ ಪರಿಣಾಮ ಮಂಡ್ಯ ಸೇರಿದಂತೆ ಇತರೆಡೆಗಳಲ್ಲಿ ಅತಿಥಿ ಉಪನ್ಯಾಸಕರು ಸರಣಿ ಆತ್ಮಹತ್ಯೆಗೆ ಶರಣಾಗಿರುವುದು ಮತ್ತು ಕಿಡ್ನಿ ವೈಫಲ್ಯದಿಂದ ಎಚ್.ಅಂಬರೀಶ, ನಾಗೇಂದ್ರ, ಬಸವರಾಜ ಕಟ್ಟಿಮನಿ ಸೇರಿದಂತೆ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಡಲೇ ಸರ್ಕಾರ ಪರಿಹಾರ ಮತ್ತು ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸೇವಾ ಭದ್ರತೆ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕ ಶಿವಕುಮಾರ, ಉಪನ್ಯಾಸಕರಾದ ಡಾ.ಎಂ.ಪ್ರಭಾಕರ, ಡಾ.ಎಂ.ಸುರೇಶ್, ನವಾಜ್ ಬಾಷಾ, ಬಿ.ಎಚ್.ಎಂ.ಕೊಟ್ರಯ್ಯ, ಎಂ.ಬಸವರಾಜ, ಲಿಂಗಾನಾಯ್ಕ, ಮಾಳಗಿ ಮಂಜುನಾಥ್, ಟಿ.ಶಫಿವುಲ್ಲಾ ಇತರರಿದ್ದರು.