

ಶ್ವಾನದಳ, ಬೆರಳಚ್ಚು ತಜ್ಞರ ತಂಡದಿಂದ ಸ್ಥಳ ಪರಿಶೀಲನೆ
ಹರಪನಹಳ್ಳಿ: ಪಟ್ಟಣದ ಎಡಿಬಿ ಕಾಲೇಜು ಆವರಣದಲ್ಲಿ ಗುರುವಾರ ರಾತ್ರಿ ನಡೆದ ಆರ್‌ಟಿಐ ಕಾರ್ಯಕರ್ತ ಶ್ರೀಧರ ಹತ್ಯೆಗೆ ಸಂಬಂಧಿಸಿ ತನಿಖೆಗೆ ಬಳ್ಳಾರಿಯಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶ್ವಾನವು ಎಡಿಬಿ ಕಾಲೇಜು ಆವರಣದಿಂದ ವೀ.ವಿ.ಎಸ್.ಕಾಲೇಜು ಮುಂಭಾಗದ ಮಾರ್ಗದಿಂದ ಪೆಟ್ರೋಲ್ ಬಂಕ್, ಮುಖ್ಯ ರಸ್ತೆ, ಬೈಪಾಸ್ ರಸ್ತೆ ಸೇರಿದಂತೆ ವಿವಿಧೆಡೆ ಸಂಚರಿಸಿದೆ. ಬೆರಳಚ್ಚು ತಜ್ಞರು ಸ್ಥಳದಲ್ಲಿದ್ದ ವಸ್ತು, ಕುರ್ಚಿಯಲ್ಲಿ ಆಗಿದ್ದ ರಕ್ತಸ್ರಾವದ ಸ್ಥಳವನ್ನು ಪರಿಶೀಲಿಸಿದರು.
ತನಿಖೆ ಚುರುಕು: ವಾಸ್ತವ್ಯ ಹೂಡಿದ್ದ ಬಳ್ಳಾರಿ ಎಎಸ್ಪಿ ಟಿ.ಎಸ್.ಲಾವಣ್ಯಾ ಅವರ ತಂಡ ರಾತ್ರಿಯಿಡಿ ಆರೋಪಿಗಳ ಪತ್ತೆಗೆ ವಿವಿಧ ತಂಡಗಳನ್ನು ರಚಿಸಿದರು. ಕಾಲೇಜು ಕ್ಯಾಂಟೀನ್ ಮಾಲೀಕ ಚನ್ನವೀರನಗೌಡ ಅವರ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದರು.
ಕಾಲೇಜ್‌ನಲ್ಲಿದ್ದ ಸಿಸಿ ಕ್ಯಾಮರಾ, ವಿವಿಧ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳ ವಿಡಿಯೋ ಫೂಟೆಜ್ ಸಂಗ್ರಹಿಸಿಕೊಂಡ ಬಳಿಕ ಮೃತ ಶ್ರೀಧರ್ ಪತ್ನಿ ನೀಡಿದ ದೂರು ಆಧರಿಸಿ ಮೊಬೈಲ್ ಟ್ರೇಸಿಂಗ್ ಮೂಲಕ ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯ ಪ್ರಕಾರ ಆರೋಪಿಯನ್ನು ಗುರುತಿಸಿ, ಅವರನ್ನು ಬಂಧಿಸಲು ಎರಡು- ಮೂರು ತಂಡಗಳನ್ನು ರಚಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಎಎಸ್ಪಿ ತಿಳಿಸಿದರು. ಬಳ್ಳಾರಿ ಗುಪ್ತಚರ ಇಲಾಖೆಯ ಡಿವೈಎಸ್ಪಿ ಬಿ.ಎಸ್.ತಳವಾರ್, ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ ರಾವ್, ಸಿಪಿಐ ನಾಗರಾಜ ಎಂ.ಕಮ್ಮಾರ್, ಪಿಎಸ್‌ಐ ಪ್ರಕಾಶ್, ಕಿರಣ್, ನಾಗರಾಜ್ ಇತರರಿದ್ದರು.
ಪತ್ನಿಯಿಂದ ದೂರು ದಾಖಲು: ಮೃತ ಶ್ರೀಧರ ಪತ್ನಿ ಪಿ.ಎಂ.ಶಿಲ್ಪಾ ಅವರು ನೀಡಿದ ದೂರಿನ ಪ್ರಕಾರ, ನಾನು ಉಚ್ಚಂಗಿದುರ್ಗದಲ್ಲಿದ್ದಾಗ, ನನ್ನ ಗಂಡ ಜು.13ರಂದು ನನಗೆ ಕರೆ ಮಾಡಿ, ನಾನು ಪಿ.ಟಿ.ಪರಮೇಶ್ವರನಾಯ್ಕ ಮಗ ಪಿ.ಟಿ.ಭರತ್ ವಿರುದ್ಧ ಕೇಸು ಮಾಡಿದ್ದೇನೆ. ಎಚ್.ಕೆ.ಹಾಲೇಶ್ ಮತ್ತು ಅವರ ಮಗನ ಮೇಲೆ ಮತ್ತು ಅವರ ಹೊಲದ ವಿಷಯದ ಬಗ್ಗೆಯು ಕೇಸ್ ದಾಖಲಿಸಿದ್ದು ಅವರಿಂದಲೂ ಜೀವ ಬೆದರಿಕೆ ಇದೆ ಎಂದು ಹೇಳಿದ್ದರು. ಘಟನೆ ಬಗ್ಗೆ ಹೋಟೆಲ್ ಮಾಲೀಕ ಚನ್ನವೀರನಗೌಡ ಅವರನ್ನು ವಿಚಾರಿಸಿದಾಗ, ವಾಗೀಶ್ ಮತ್ತು ಆತನ ಜತೆಯಲ್ಲಿ ಬಂದಿದ್ದ 4 ಜನರು ಕಬ್ಬಿಣದ ರಾಡು, ಸಿಮೆಂಟ್ ಇಟ್ಟಿಗೆ ಹಿಡಿದುಕೊಂಡು ಚಹಾ ಕುಡಿಯುತ್ತಿದ್ದ ನನ್ನ ಗಂಡನ ಮೇಲೆ ತಲೆಯ ಹಿಂಭಾಗ, ನೆತ್ತಿಯ ಮೇಲೆ ಮನಬಂದಂತೆ ಹೊಡೆದು ಪರಾರಿಯಾಗಿದ್ದಾರೆಂದು ಅವರು ತಿಳಿಸಿದ ಮೇರೆಗೆ ಲಿಖಿತ ದೂರು ಸಲ್ಲಿಸಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.