ಮುಂದಿನ ಪೀಳಿಗೆಗೆ ಕೆರೆಗಳ ರಕ್ಷಣೆ ಮಾಡಿ

Harapanahalli Lake Cleaning
ಹರಪನಹಳ್ಳಿಯಲ್ಲಿ ನಾಯಕನಕೆರೆ ಸ್ವಚ್ಛತಾ ಅಭಿಯಾನಕ್ಕೆ ಸಿಪಿಐ ನಾಗರಾಜ ಎಂ.ಕಮ್ಮಾರ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಡಾ.ಮಹೇಶ, ಮನ್ಸೂರ್ ಅಹ್ಮದ್, ಬಿ.ರಾಜಶೇಖರ, ಚಂದ್ರಮೌಳಿ ಇತರರಿದ್ದರು.
Published on

ಹರಪನಹಳ್ಳಿ: ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಿಪಿಐ ನಾಗರಾಜ ಎಂ.ಕಮ್ಮಾರ ಹೇಳಿದರು.

ಪಟ್ಟಣದ ಕಾಯಕದಹಳ್ಳಿ ರಸ್ತೆಯಲ್ಲಿರುವ ನಾಯಕನ ಕೆರೆ ಬಳಿ ಪುರಸಭೆ ಕೈಗೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.

ನಾಯಕನ ಕೆರೆ ಪಟ್ಟಣದ ಜನರ ಆಸ್ತಿಯಾಗಿದ್ದು, ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ, ಪೂರ್ವಜರು ಕೆರೆಗಳನ್ನು ನಿರ್ಮಿಸುವುದರ ಹಿಂದೆ ವೈಜ್ಞಾನಿಕ ಅಂಶವಿರುತ್ತದೆ. ಅಂತರ್ಜಲವೃದ್ಧಿ ಆಗುವುದರ ಜತೆಗೆ ನೀರಿನ ಸಮಸ್ಯೆ ನೀಗಿಸುತ್ತವೆ. ಮುಂದಿನ ಪೀಳಿಗೆಗೆ ಕೆರೆಗಳ ಸಂರಕ್ಷಣೆ ಅಗತ್ಯವಾಗಿದೆ. ಕೆರೆ ಬಳಿ ಯಾರೂ ತ್ಯಾಜ್ಯ ಹಾಕಬಾರದು. ಬೇಡವಾದ ವಸ್ತುಗಳನ್ನು ಕೆರೆಯಲ್ಲಿ ಎಸೆಯಬಾರದು. ಕೆರೆ, ಹಳ್ಳ ಕೊಳ್ಳಗಳನ್ನು ನಿರ್ಲಕ್ಷಿಸಿದರೆ ಅದರ ಪರಿಣಾಮವನ್ನು ಪ್ರತಿಯೊಬ್ಬರೂ ಎದುರಿಸಬೇಕಾಗುತ್ತದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಕೆರೆಗಳು ಜನರ ಜೀವನಾಡಿಗಳು, ಮಲಿನಗೊಳಿಸಬಾರದು. ಸತ್ತ ಪ್ರಾಣಿಗಳನ್ನು ತಂದು ಹಾಕಬಾರದು. ಮದ್ಯದ ಬಾಟಲಿ, ಕಸವನ್ನು ಎಸೆಯಬಾರದು ಎಂದ ಅವರು, ನೀರಿನ ಮಹತ್ವ, ಸಂರಕ್ಷಣೆ ಹಾಗೂ ಪರಿಸರ ಕಾಪಾಡುವ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ಕೋರಿದರು.
ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿದರು.

ನೌಕರರ ಸಂಘ, ಶಿಕ್ಷಕರ ಸಂಘ, ವೈದ್ಯಕೀಯ ಸಂಘ, ಪ್ರಕೃತಿ ಪಂಥ, ಜೀವಜಲ ಟ್ರಸ್ಟ್, ಜೀವ ವಿಮಾ ಪ್ರತಿನಿಧಿಗಳ ಸಂಘಗಳ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net