ಬಸ್‌ಗಳಲ್ಲಿ ವಿದ್ಯಾರ್ಥಿಗಳ ಟಾಪ್ ಸರ್ವೀಸ್

HRP-01
ಅರಸೀಕೆರೆಯಿಂದ ಉಚ್ಚಂಗಿದುರ್ಗ ಮಾರ್ಗವಾಗಿ ಹೋಗುತ್ತಿರುವ ಖಾಸಗಿ ಬಸ್ ಮೇಲೆ ವಿದ್ಯಾರ್ಥಿಗಳು ಕುಳಿತಿರುವುದು.
Published on

ಹರಪನಹಳ್ಳಿ: ಸರ್ಕಾರಿ ಬಸ್‌ಗಳು ಸಕಾಲಕ್ಕೆ ಬಾರದೆ ವಿದ್ಯಾರ್ಥಿಗಳು ಪ್ರಾಣ ಪಣಕ್ಕಿಟ್ಟು ಖಾಸಗಿ ಬಸ್‌ಗಳ ಟಾಪ್ ಮೇಲೆ ಕುಳಿತು ಸಂಚರಿಸುವ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗುವ ಧಾವಂತದಲ್ಲಿ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳನ್ನೇರಿ ಪ್ರಯಾಣ ಮಾಡುತ್ತಿದ್ದಾರೆ.

ಹಗರಿಗುಡಿಹಳ್ಳಿ, ಪುಣಭಗಟ್ಟ, ಉಚ್ಚಂಗಿದುರ್ಗ, ತುಂಬಿಗೇರಿ, ಕಂಚೀಕೆರೆ, ತೌಡೂರು, ಕ್ಯಾರಕಟ್ಟಿ, ಬೂದಿಹಾಳು, ಕಬ್ಬಳ್ಳಿ, ಕಂಬತ್ತಹಳ್ಳಿ, ಯರಬಳ್ಳಿ ಗ್ರಾಮಗಳು ಸೇರಿದಂತೆ 68 ಹಳ್ಳಿಗಳಿಂದ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಶಿಕ್ಷಣ ಪಡೆಯಲು ನಿತ್ಯ ನೂರಾರು ವಿದ್ಯಾರ್ಥಿಗಳು ಅರಸೀಕೆರೆಗೆ ತೆರಳುತ್ತಾರೆ. ಆದರೆ, ಸೂಕ್ತ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಶಿಕ್ಷಣಕ್ಕಿಂತ ಬಸ್‌ಗಾಗಿ ಕಾಯುವುದು, ನೂಕು-ನುಗ್ಗಲಿನಲ್ಲಿ ಖಾಸಗಿ ಬಸ್ ಏರುವುದು ಅನಿವಾರ್ಯವಾಗಿದೆ.

ಕೆಲ ವಿದ್ಯಾರ್ಥಿಗಳು ಖಾಸಗಿ ವಾಹನಗಳಿಗೆ ಡ್ರಾಪ್ ಕೇಳುತ್ತಾರೆ. ಇನ್ನು ಕೆಲವರು ಆಟೋ, ಟೆಂಪೊ ಇನ್ನಿತರ ವಾಹನಗಳಲ್ಲಿ ತೆರಳುತ್ತಾರೆ. ಉಳಿದವರು ಬಸ್‌ಗಾಗಿ ಕಾಯುತ್ತಾರೆ. ಸರ್ಕಾರಿ ಬಸ್‌ಗಳು ಸಕಾಲಕ್ಕೆ ಬರುತ್ತಿಲ್ಲ. ಇದರಿಂದ ತರಗತಿಗಳಿಗೆ ಹೋಗಲು ವಿಳಂಬವಾಗಲಿದೆ ಎಂಬ ಭೀತಿಯಲ್ಲಿ ಖಾಸಗಿ ಬಸ್‌ಗಳ ಮೊರೆ ಹೋಗುತ್ತಿದ್ದಾರೆ. ಬಸ್ ಮೇಲೆ ಏರಿ ಕುಳಿತುಕೊಳ್ಳುತ್ತಾರೆ. ಈ ರೀತಿ ಬಸ್ ಏರುವಾಗ ಅಚಾತುರ್ಯಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷೃ: ಅರಸೀಕೆರೆಯಲ್ಲಿ ಜೂನ್ 2 ರಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಅತಿ ಹೆಚ್ಚು ಮನವಿಗಳು ಸಲ್ಲಿಕೆಯಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿ, ಜಿಲ್ಲಾ ಹಾಗೂ ತಾಲೂಕ ಮಟ್ಟದ ಸಾರಿಗೆ ಅಧಿಕಾರಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಸೂಚಿಸಿದ್ದರು. ಆದರೂ, ಯಾವುದೇ ಕ್ರಮವಹಿಸದಿರುವುದು ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅರಸೀಕೆರೆ ಪ್ರಭಾವಿ ರಾಜಕಾರಣಿಗಳು ಇರುವ ಗ್ರಾಮವಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದಾರೆ.

ಕೋಟ್: ಹರಪನಹಳ್ಳಿ ತಾಲೂಕಿನಲ್ಲಿಯೇ ಅರಸೀಕೆರೆ ದೊಡ್ಡ ಹೋಬಳಿಯಾಗಿದೆ. ಸುತ್ತಲಿನ ಹಲವಾರು ಗ್ರಾಮಗಳಿಂದ ವಿದ್ಯಾಭ್ಯಾಸಕ್ಕಾಗಿ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ವಿದ್ಯಾರ್ಥಿಗಳಿಗೆ ಸರಿಯಾದ ಸಾರಿಗೆ ಸೌಲಭ್ಯ ಒದಗಿಸಲು ಸಾರಿಗೆ ಇಲಾಖೆ ಮುಂದಾಗಲಿ.

ವೈ. ದೇವೇಂದ್ರಪ್ಪ. ಬಳ್ಳಾರಿ ಮಾಜಿ ಸಂಸದ, ಅರಸೀಕೆರೆ

ಕೋಟ್: ಅರಸೀಕೆರೆ ಹೋಬಳಿಯ ಹಲವು ಗ್ರಾಮಗಳಿಗೆ ಸಾರಿಗೆ ಸಂಪರ್ಕ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಗರ್ಭಿಣಿಯರು ಹಾಗೂ ತುರ್ತು ಕೆಲಸದಿಂದ ದೂರದ ಊರುಗಳಿಗೆ ತೆರಳುವವರಿಗೆ ಅನನುಕೂಲವಿದೆ. ಡಿಸಿ ಅವರು ಸಾರಿಗೆ ಅಧಿಕಾರಿಗಳಿಗೆ ಸರಿಯಾಗಿ ವ್ಯವಸ್ಥೆ ಕಲ್ಪಿಸಿಕೊಡಲು ಸೂಚಿಸಿದ್ದರೂ ಅಧಿಕಾರಿಗಳು ಕ್ರಮವಹಿಸಿಲ್ಲ.

ಗುಡಿಹಳ್ಳಿ ಹಾಲೇಶ್, ಅಖಿಲ ಭಾರತ ಕಿಸಾನ್ ಸಮಿತಿ ಜಿಲ್ಲಾಧ್ಯಕ್ಷ, ಹರಪನಹಳ್ಳಿ

ಕೋಟ್: ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್ ಸೌಲಭ್ಯ ಒದಗಿಸಲಾಗಿದೆ. ಹರಪನಹಳ್ಳಿಯಿಂದ ಅರಸೀಕೆರೆಗೆ ಸಂಜೆ ನಂತರ ಬಸ್ ಸೌಲಭ್ಯವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಸದ್ಯದಲ್ಲೇ ಸಂಜೆ ನಂತರ ಬಸ್ ಬಿಡುವ ವ್ಯವಸ್ಥೆ ಮಾಡಲಾಗುವುದು. ಸದ್ಯ ಸಿಬ್ಬಂದಿ ಕೊರತೆಯಿಂದ ಹೆಚ್ಚುವರಿ ಬಸ್ ಬಿಡಲು ಸಾಧ್ಯವಿಲ್ಲ . ಸರ್ಕಾರದ ಅಧಿಸೂಚನೆ ನಂತರ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು.

ಮಂಜುಳಾ, ಸಾರಿಗೆ ಡಿಪೋ ವ್ಯವಸ್ಥಾಪಕಿ, ಹರಪನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net