ಧಾರ್ಮಿಕ ಕಾರ್ಯಗಳಿಂದ ಅಭಿವೃದ್ಧಿ ಸಾಧ್ಯ

Untitled design(1)
Published on

ಹರಪನಹಳ್ಳಿ: ಕರಿಗಲ್ಲು ಸ್ಥಾಪನೆಯಿಂದ ಊರಿಗೆ ತೊಂದರೆ ಆಗುವುದಿಲ್ಲ ಎಂಬ ನಂಬಿಕೆ ಸನಾತನ ಕಾಲದಿಂದಲೂ ಇದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಅರಸೀಕೆರೆ ಹೋಬಳಿಯ ಕನಕನ ಬಸಾಪುರ ಗ್ರಾಮದಲ್ಲಿ ಗುರುವಾರ ಕರಿಗಲ್ಲು ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಗಳಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ. ವೇದ, ವಚನಗಳನ್ನು ಗುಪ್ತವಾಗಿಟ್ಟ ಕರಿಗಲ್ಲು ಪ್ರತಿಷ್ಠಾಪಿಸಿರುವುದು ಒಳ್ಳೆಯ ಬೆಳವಣಿಗೆ. ಇಂದಿನಿಂದ ಗ್ರಾಮದಲ್ಲಿ ಉತ್ತಮ ಮಳೆ, ಬೆಳೆ ಬರಲಿ. ಅಲ್ಲದೆ ಯಾವುದೇ ಹಾನಿಗಳು ಬರದಿರಲಿ ಎಂದರು.

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರದ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕು. ಸ್ವ ಸಹಾಯ ಸಂಘಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಕುಟುಂಬ ನಿರ್ವಹಣೆ ಸುಲಭ ಎಂದರು.

ಬಸವತತ್ವ ಚಿಂತಕ ಡಿ.ಶಾಬ್ರಿನಾ ಮಹಮ್ಮದ್ ಅಲಿ ಮಾತನಾಡಿ, ಆಕಾಶ ಎಷ್ಟು ಬೃಹದಾಕಾರವಿದೆ ಎಂದು ಲೆಕ್ಕಿಸಲು ಆಗುವುದಿಲ್ಲವೋ ಅದೇ ರೀತಿ ಬಸವತತ್ವಕ್ಕೆ ಮಿತಿ ಇಲ್ಲ್ಲ. ಬಸವಣ್ಣ ಯಾವುದೇ ಜಾತಿಗೆ ಸೀಮಿತಿವಾಗಿಲ್ಲ. ಅವರು ವಿಶ್ವಗುರುವಾಗಿದ್ದಾರೆ ಎಂದರು.

ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮದ ಮಹತ್ವವನ್ನು ಗ್ರಾಮಗಳಲ್ಲಿ ಕಾಣಬಹುದು ಎಂದರು. ಪ್ರಮುಖರಾದ ಕೆ.ಮಂಜುನಾಥ, ಬಿ.ಕೆ.ಪ್ರಕಾಶ್, ಕೆ.ಮಹಾಂತೇಶ್, ಅಣ್ಣಪ್ಪ, ಸಲಾಂ ಸಾಹೇಬ್, ಡಿ.ವೀರಣ್ಣ, ಶಾರದಾ ಬಾಯಿ, ಕೆಂಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net