ಮತದಾರರು ಬದಲಾದರೆ ಸುಧಾರಣೆ ಸಾಧ್ಯ

harapanahalli walk towards Sarvodaya
ಬಳಿಗನೂರಲ್ಲಿ ಸೋಮವಾರ ಆಯೋಜಿಸಿದ್ದ ‘ನಮ್ಮ ನಡಿಗೆ ಸರ್ವೋದಯದೆಡೆಗೆ’ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು. ಜಲತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ, ಸರ್ವೋದಯ ಸಂಚಾಲಕ ಶಿವನಕೆರೆ ಬಸವಲಿಂಗಪ್ಪ, ಕೆ.ಮಂಜುನಾಥ, ರಾಮನಗೌಡ, ಪರಶುರಾಮ ಇತರರಿದ್ದರು.
Published on

ಹರಪನಹಳ್ಳಿ: ತಾತ್ವಿಕರು ರಾಜ್ಯದ ಚುಕ್ಕಾಣಿ ಹಿಡಿಯಬೇಕಾದರೆ ಮತದಾರರು ಬದಲಾಗಬೇಕು. ಆಗ ಸಮಾಜ ಸುಧಾರಣೆ ಸಾಧ್ಯ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಳಿಗನೂರಲ್ಲಿ ಸರ್ವೋದಯ ಸಮುದಾಯ ಕರ್ನಾಟಕ, ಇಕ್ರಾ ಸಾವಯವ ಕೃಷಿ ಸಂಘಟನೆ, ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ‘ನಮ್ಮ ನಡಿಗೆ ಸರ್ವೋದಯದೆಡೆಗೆ’ ಘೋಷವಾಕ್ಯದಲ್ಲಿ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದರು.

ಭಾರತವು ಬುದ್ಧ, ಬಸವ, ಅಂಬೇಡ್ಕರ್ ನಾಡಾಗಬೇಕು. ನಾವೆಲ್ಲ ಅವರ ತತ್ವಗಳನ್ನು ಪಾಲಿಸಬೇಕು. ಇದಕ್ಕೆ ಮಠ-ಮಾನ್ಯಗಳೂ ಕೈಜೋಡಿಸಬೇಕು ಎಂದು ಹೇಳಿದರು. ಮನುಷ್ಯ ಸರಿಯಾದರಷ್ಟೇ ದೇಶ ಸರಿ ಆಗುತ್ತದೆ. ಮನೆ ಯಜಮಾನ ಯಾವತ್ತೂ ಧೃತಿಗೆಡಬಾರದು. ಕುಟುಂಬಗಳು ಸಮಾಜಕ್ಕೆ ತಳಹದಿ ಇದ್ದಂತೆ ಎಂದು ಹೇಳಿದರು. ಪಾಂಡೊಮಟ್ಟಿ ಗುರುಬಸವ ಸ್ವಾಮೀಜಿ ಮಾತನಾಡಿ, ಭಾರತ ಆಧ್ಯಾತ್ಮಿಕ ಕೇಂದ್ರಸ್ಥಾನ. ಇಂಥ ದೇಶದ ಯುವಕರಲ್ಲಿ ಕೋಮು, ದ್ವೇಷ ಬಿತ್ತುವ ಕೆಲಸವಾಗುತ್ತಿದೆ. ಇದರ ಬದಲಿಗೆ ಬಸವತತ್ವ ಬಿತ್ತಬೇಕಿದೆ. ಇಂದು ಆಡಳಿತ ವ್ಯವಸ್ಥೆ ಕೆಟ್ಟಿದ್ದು, ಇದಕ್ಕೆ ರಾಜಕೀಯವೇ ಕಾರಣ. ರಾಜಕಾರಣಿಗಳು ನೀಡುವ ಹಣ-ವಸ್ತುಗಳಿಗೆ ಬಲಿಯಾಗಬಾರದು. ನಮ್ಮ ಮತ ದಾನವಾಗಬೇಕೇ ಹೊರತು ಕ್ರಯವಾಗಬಾರದು. ಇಂದು ಮಾನವೀಯತೆ ಉಳಿದಿರೋದು ಹಳ್ಳಿಗಳಲ್ಲಷ್ಟೇ ಎಂದರು.

ಸಾಹಿತಿ-ಚಿಂತಕ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸರ್ವರ ಉದ್ಧಾರಕ್ಕಾಗಿ ಗಾಂಧೀಜಿ ಅವರು ಸರ್ವೋದಯ ಸಂಘಟನೆ ಮೂಲಕ ಹೋರಾಟಕ್ಕೆ ನಾಂದಿ ಹಾಡಿದ್ದರು. ಇಂದಿನ ಸರ್ಕಾರಗಳು ರೈತರನ್ನು ನಿರ್ಲಕ್ಷ್ಯ ಮಾಡಿವೆ. ಕೃಷಿಗೆ ಬೇಕಾದ ಆಗತ್ಯ ಮಾಹಿತಿ ನೀಡಲು ಆಗುತ್ತಿಲ್ಲ. ವಿವಿಗಳು ಕೃಷಿ ಸಂಶೋಧನೆ ಮಾಡುತ್ತಿಲ್ಲ. ಹೀಗಾಗಿ ಸರ್ವೋದಯ ತಂಡ ಕೃಷಿ ಕುರಿತು ಜನಜಾಗೃತಿ ಮೂಡಿಸುತ್ತಿದೆ ಎಂದರು.

ಚನ್ನಗಿರಿ ಮಾಜಿ ಶಾಸಕ ಮಹಿಮಾ ಪಾಟೀಲ್, ಧಾರವಾಡದ ಜನಾಂದೋಲನಾ ನೇತಾರ ಡಾ.ಶಾರದಾ ಗೋಪಾಲ, ಇಕ್ರಾ ಸಂಸ್ಥೆ ಮುಖ್ಯಸ್ಥೆ ಗಾಯತ್ರಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net