

ಹರಪನಹಳ್ಳಿ: ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಮುದ ಸಿಗಲಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ನಿಲವಂಜಿ ಗ್ರಾಮದ ಶ್ರೀಮತಿ ರುದ್ರಾಂಬ ಎಂ.ಪಿ.ಪ್ರಕಾಶ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪ್ರಾಥಮಿಕ ಶಾಲಾ ವಿಭಾಗದ ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗರಡಿ ಮನೆಗಳಲ್ಲಿ ಯುವಕರು ಕಸರತ್ತು ಮಾಡುವುದು, ಗುಂಡು, ಬಂಡಿ ಗಾಲಿಗಳನ್ನು ಎತ್ತುವುದು ಮತ್ತು ದೇಸಿ ಕ್ರೀಡೆಗಳಾದ ಕಬಡ್ಡಿ, ಖೋಖೊ ಆಡುತ್ತಾ ದೇಹ ದಂಡಿಸಿ ಆರೋಗ್ಯಕರ ಜೀವನ ಸಾಗಿಸುತ್ತಿದ್ದರು. ಆದರೆ, ಬದಲಾದ ಯುಗದಲ್ಲಿ ಆಧುನಿಕ ಕ್ರೀಡೆಗಳು ಕೂಡ ಬದಲಾವಣೆ ಹೊಂದಿವೆ.
ಇಂದಿನ ಮಕ್ಕಳಲ್ಲಿ ಆಟಗಳ ಬಗೆಗಿನ ಆಸಕ್ತಿಯು ಕಡಿಮೆಯಾಗಿದ್ದು, ಇಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದಿನನಿತ್ಯದ ಬದುಕಿನಲ್ಲಿ ಸದಾ ಲವಲವಿಕೆಯಿಂದ ಕೂಡಿರಲು ಸಹಕಾರಿಯಾಗುತ್ತದೆ. ಆಟಗಳಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧಾ ಮನೋಭಾವನೆ ಹೊಂದಿರಬೇಕು ಎಂದರು.
ಬಿಇಒ ಎಚ್.ಲೇಪಾಕ್ಷಪ್ಪ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣದೊಂದಿಗೆ ಕ್ರೀಡಾಸಕ್ತಿ ಅಗತ್ಯ. ಮಕ್ಕಳು ಯಾವ ಕ್ಷೇತ್ರದಲ್ಲಿ ಅಭಿರುಚಿ ಹೊಂದಿದ್ದಾರೆ ಎನ್ನುವುದನ್ನು ಅರಿತು ಅವರಿಗೆ ಆಸಕ್ತಿ ಇರುವ ಕಡೆ ಶಿಕ್ಷಣ ನೀಡಬೇಕು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಕೆ.ಪ್ರಕಾಶ ಮಾತನಾಡಿ, ನಿಲವಂಜಿ ಗ್ರಾಮದಲ್ಲಿ ಶಾಲೆಗೆ ಜಾಗದ ಕೊರತೆ ಇತ್ತು. ಆಗ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರು ತಂದೆ-ತಾಯಿ ಹೆಸರಿನಲ್ಲಿ ಶಾಲೆ ನಿರ್ಮಿಸಿ, ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಸಹಕರಿಸಿದರು. ಕ್ರೀಡೆಗೆ ಅದರದ್ದೆ ಆದ ಪ್ರಾಧಾನ್ಯತೆ ಇದೆ.
ಗ್ರಾಮೀಣ ಪ್ರದೇಶಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಸರು ಮಾಡಿದ ಸಾಕಷ್ಟು ಕ್ರೀಡಾ ಪಟುಗಳನ್ನು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಮೂಡುವ ವಾತಾವರಣ ನಿರ್ಮಿಸಬೇಕು ಎಂದರು.
ಬಿಆರ್‌ಪಿ ವಾಗೇಶ್, ಸಿಆರ್‌ಪಿ ಶ್ರೀಕಾಂತ, ಮುಖ್ಯಶಿಕ್ಷಕಿ ಪ್ರೇಮಾ, ಶಿಕ್ಷಕರಾದ ಎಸ್.ಷರೀಫ್, ಮಂಜುನಾಥ ಪೂಜಾರಿ, ಉಮೇಶ ಗೌಡ, ವಲಯ ಸಂಚಾಲಕಿ ಅನಿತಮ್ಮ , ದೈಹಿಕ ಶಿಕ್ಷಣ ಶಿಕ್ಷಕ ಕರಿಬಸಪ್ಪ ಇತರರಿದ್ದರು.