

ಹರಪನಹಳ್ಳಿ: ಮೀನುಗಾರಿಕಾ ಕ್ಷೇತ್ರ ತಾಂತ್ರಿಕವಾಗಿ ಬೆಳವಣಿಗೆಯಾಗಿದ್ದು, ಮೀನುಗಾರಿಕೆ ಕೃಷಿಯು ಅತ್ಯಂತ ಸುಲಭವಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲೇಶ್ ಬಿ. ತಿಳಿಸಿದರು.
ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲವು ದಶಕಗಳ ಹಿಂದೆ ಮೀನುಗಾರಿಕಾ ಕ್ಷೇತ್ರವು ಮಂದಗತಿಯಲ್ಲಿತ್ತು.
1947ರ ಆಸು-ಪಾಸಿನಲ್ಲಿ ಹೀರಾನಂದ ಚೌಧರಿ ಹಾಗೂ ಹನಿಕುನಿ ಎಂಬ ವಿಜ್ಞಾನಿಗಳ ಪರಿಶ್ರಮದಿಂದ ಮೀನುಗಾರಿಕೆ ಕ್ಷೇತ್ರವು ಸಾಕಷ್ಟು ಅಭಿವೃದ್ಧಿಗೊಂಡಿದೆ. ಮೀನು ಕೃಷಿ ಪ್ರಾರಂಭಿಸಿ, ಆರ್ಥಿಕಾಭಿವೃದ್ಧಿಗಾಗಿ ತಾಂತ್ರಿಕರಣಗೊಳಿಸಿದ ಪರಿಣಾಮ ಇಂದು ಮಾರುಕಟ್ಟೆಗಳು ಹೆಚ್ಚಾಗಿವೆ ಎಂದರು.
ಮಾಲವಿ ಮೀನು ಪಾಲನಾ ಕೇಂದ್ರದ ಉಪನಿರ್ದೇಶಕ ರಿಜ್ವಾನ್ ಅಹ್ಮದ್ ಮಾತನಾಡಿ, ಮೀನಿನಲ್ಲಿ ಸಾಕಷ್ಟು ಔಷಧ ಗುಣಗಳಿದ್ದು, ಮಾನವನ ದೇಹದ ಪ್ರಮುಖ ಅಂಗಾಂಗಗಳ ಬೆಳವಣಿಗೆ ಮತ್ತು ಪಿಟ್ಯುಟರಿ ಗ್ರಂಥಿ ಬಲವರ್ಧನೆಗೆ ಉಪಯುಕ್ತವಾಗಿದೆ.
ಜಾಗತಿಕವಾಗಿ ನಮ್ಮ ದೇಶದ ಮೀನುಗಾರಿಕೆ ಕ್ಷೇತ್ರ ಮುಂದುವರಿದಿದ್ದು, ಜಗತ್ತಿನಲ್ಲಿ ಎರಡನೇ ದೊಡ್ಡ ಉತ್ಪಾದನಾ ಶಕ್ತಿಯಾಗಿದೆ. ದೇಶದ ಆರ್ಥಿಕತೆಯಲ್ಲಿ ಶೇ.8 ಆದಾಯ ಮೀನುಗಾರಿಕಾ ಕ್ಷೇತ್ರದಿಂದ ಬರುತ್ತಿದೆ ಎಂದರು.
ಮೀನುಗಾರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಗಂಗಮ್ಮ ಪವಾಡಿ, ನಾಗೇಂದ್ರಪ್ಪ, ಪರಸಪ್ಪ, ಕೊಟ್ರಪ್ಪಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳಾದ ಎನ್. ರವಿ, ಆನಂದ, ದ್ಯಾಮಜ್ಜಿ ಹನುಮಂತ, ತಿಮ್ಮಣ್ಣ, ತಿಪ್ಪನಹಳ್ಳಿ ಮಂಜುನಾಥ, ಸಿದ್ದೇಶ್ ಬಿ, ಅಂಬಿ ರಾಜಪ್ಪ, ಅಂಜಿನಪ್ಪ, ಭೀಮಪ್ಪ, ಕುಲುಮಿ ವೀರಣ್ಣ, ಹಿರೇಮೇಗಳಗೇರಿ ನಾಗರಾಜ, ಹುಲಿಕಟ್ಟಿ ಸಾಂತಲಿಂಗಪ್ಪ, ಶಿಗ್ರಿಹಳ್ಳಿ ಗುಡ್ಡಪ್ಪ, ಕಂಚಿಕೆರೆ ಅಂಜಿನಪ್ಪ ಇತರರಿದ್ದರು.