ನಂಜನಗೂಡಿಂದ ಬಂದವರನ್ನು ಬಳ್ಳಾರಿ ಆಸ್ಪತ್ರೆಗೆ ಕಳಿಸಿ ಅಧಿಕಾರಿಗಳಿಗೆ ಶಾಸಕ ಕರುಣಾಕರರೆಡ್ಡಿ ಸೂಚನೆ

APR17-HRP-MEETING-1
Published on

ಹರಪನಹಳ್ಳಿ: ನಂಜನಗೂಡಿನಿಂದ ಹರಪನಹಳ್ಳಿ ತಾಲೂಕಿಗೆ ಆಗಮಿಸಿದ 9 ಜನರನ್ನು ಕೂಡಲೇ ಬಳ್ಳಾರಿಗೆ ಕಳಿಸಿ ಪರೀಕ್ಷೆ ಮಾಡಿಸಿ. ನಿರ್ಲಕ್ಷ್ಯ ಸಲ್ಲದೆಂದು ಶಾಸಕ ಜಿ.ಕರುಣಾಕರರೆಡ್ಡಿ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕರೊನಾ ನಿಯಂತ್ರಣ ಕುರಿತು ವಿವಿಧ ಇಲಾಖೆ ಅಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದರು.

ನಂಜನಗೂಡಿನಿಂದ ಬಂದವರು ಸೇರಿದಂತೆ 100 ಕ್ಕೂ ಅಧಿಕ ಜನರನ್ನು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಇನಾಯತ್‌ಉಲ್ಲಾ ಮಾಹಿತಿ ನೀಡಿದರು.

ಈ ವೇಳೆ ಶಾಸಕರು ಮೈಸೂರು, ನಂಜನಗೂಡಿನಿಂದ ಬಂದವರನ್ನು ಹಗುರವಾಗಿ ಪರಿಗಣಿಸಬೇಡಿ. ತಡಮಾಡದೇ ಬಳ್ಳಾರಿಗೆ ಕಳಿಸಿ ಪರೀಕ್ಷೆ ಮಾಡಿಸಿ ಎಂದರು.

ತಾಲೂಕಿನ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ಕಡ್ಡಾಯವಾಗಿ ಎನ್-95 ಮಾಸ್ಕ್ ನೀಡಿ. ಶನಿವಾರದಂದು ವಾರದ ಹಾಗೂ ದಿನವಹಿ ಸಂತೆ ಸಹ ರದ್ದುಪಡಿಸಿ ಎಂದರು. ಎಪಿಎಂಸಿಯಲ್ಲಿ ಸ್ಕಾನರ್ ಅಳವಡಿಸಿ, ಪೊಲೀಸರನ್ನು ನಿಯೋಜಿಸಿ, ಹೊರ ರಾಜ್ಯಗಳಿಂದ ಬರುವ ಲಾರಿಗಳ ನೋಂದಣಿ ಮಾಡಿ, ಲಾರಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net