ಎಂಪಿಪಿ ಇಂದಿನ ಯುವಕರಿಗೆ ಮಾದರಿ; ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಹೇಳಿಕೆ

08022022 Harapanahalli MPP Death Aniversary
Published on

ದಿ.ಎಂ.ಪಿ.ಪ್ರಕಾಶ್ ಪುಣ್ಯಸ್ಮರಣೆ ಕಾರ್ಯಕ್ರಮ

ಹರಪನಹಳ್ಳಿ: ರಾಜಕೀಯದೊಂದಿಗೆ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ರೂಢಿಸಿಕೊಂಡಿದ್ದ ಮಾಜಿ ಡಿಸಿಎಂ ದಿ.ಎಂ.ಪಿ.ಪ್ರಕಾಶ್ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ.ಲತಾ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಜ್ಯ ಕಂಡ ಸಜ್ಜನ ರಾಜಕಾರಣಿಗಳಲ್ಲಿ ಎಂ.ಪಿ.ಪ್ರಕಾಶ್ ಪ್ರಮುಖರು. ರಾಜಕಾರಣಿಯಾಗಿದ್ದರೂ ಅವರಲ್ಲೊಬ್ಬ ಕಲಾವಿದ, ರಂಗಕರ್ಮಿ, ಓದುಗ, ಸದಭಿರುಚಿಯ ಪ್ರೇಕ್ಷಕನಿದ್ದ. ಅವರೊಬ್ಬ ಸಾಂಸ್ಕತಿಕ ರಾಯಭಾರಿಯೂ ಆಗಿದ್ದರು. ಸರಳತೆ ಮತ್ತು ಸಜ್ಜನಿಕೆ ಅವರ ಗುರುತಾಗಿತ್ತು. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸ್ಥಿತಪ್ರಜ್ಞೆ ಕಾಪಾಡಿಕೊಂಡು ಬಂದಿದ್ದರು. ಉಪಮುಖ್ಯಮಂತ್ರಿಯಾಗಿದ್ದರೂ ಬಿಂಕ-ಬಿಗುಮಾನವಿಲ್ಲದೆ ಎಲ್ಲರೊಡನೆ ಮುಕ್ತವಾಗಿ ಬೆರೆಯುತ್ತಿದ್ದರು ಎಂದರು.

ವಿಧಾನಸೌಧದ ಮೆಟ್ಟಿಲು ಹತ್ತಿದರೂ ಸಾಂಸ್ಕೃತಿಕ ಸಂಬಂಧವನ್ನು ತೊರೆದಿರಲಿಲ್ಲ. ವಿನಯವಂತೂ ಅವರ ಜೀವನಶೈಲಿಯಾಗಿತ್ತು. ಈ ಎಲ್ಲ ಗುಣಗಳಿಂದಾಗಿಯೇ ಅವರು ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿದ್ದರು. ರಾಜಕಾರಣದಲ್ಲಿ ಸೋತಾಗಲೆಲ್ಲ ಸಾಂಸ್ಕೃತಿಕ ಲೋಕಕ್ಕೆ ತಮ್ಮನ್ನು ಅರ್ಪಿಸಿಕೊಂಡು ಅದನ್ನು ಬೆಳಸುವುದರ ಜತೆಗೆ ತಾವೂ ಬೆಳೆದರು. ಎಂ.ಪಿ.ಪ್ರಕಾಶ್ ಕುಟುಂಬ ಎಂದಿಗೂ ಜನಮಾನಸ ನಡುವೆಯೇ ಇದೆ. ನಾನು ಕೂಡ ನಮ್ಮ ತಂದೆಯ ಹಾದಿಯಲ್ಲಿಯೇ ಸಾಗುತ್ತಿದ್ದೇನೆ ಎಂದರು.

ಶಿವರಾಜ, ಉದಯಶಂಕರ, ಮುನೀರ್, ಶಮೀ ಉಲ್ಲಾ, ನಂದಿಬೇವೂರು ಗ್ರಾಪಂ ಉಪಾದ್ಯಕ್ಷೆ ಲಕ್ಷ್ಮೀ ಚಂದ್ರಶೇಖರ, ಯು.ಹನುಮಂತ, ಎಲ್.ಮಂಜನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net