

ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ಯುವ ಫೆಡರೇಷನ್(ಎಐವೈಎಫ್) ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ, ತಾಪಂ ಇಒ ಚಂದ್ರಶೇಖರ್ ವೈ.ಎಚ್. ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ವಿವಿಧ ಗ್ರಾ.ಪಂ.ಗಳಲ್ಲಿ ನರೇಗಾ ಯೋಜನೆಯಡಿ ಸಂಪೂರ್ಣ ಅವ್ಯವಹಾರ ನಡೆದಿರುವ ಬಗ್ಗೆ ತಾ.ಪಂ.ಗೆ ಕಳೆದ ತಿಂಗಳೂ ಮನವಿ ಸಲ್ಲಿಸಲಾಗಿತ್ತು. ಅವ್ಯವಹಾರದ ತನಿಖೆ ನಡೆಸುವ ಭರವಸೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎನ್‌ಎಂಎಂಎಸ್ ಹಾಜರಾತಿಯಲ್ಲಿ ಲೋಪವಾಗಿದ್ದು, ಮಹಿಳೆಯರ ಎನ್‌ಎಂಆರ್ ಹಾಜರಾತಿಗೆ ಪುರುಷರ ಫೋಟೊಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಕೆಲಸಕ್ಕನುಗುಣವಾಗಿ ಮಾಡದೆ ದಿನಕ್ಕೆ ಒಂದು ಫೋಟೊ ಜಿಪಿಎಸ್ ಮಾಡಲಾಗಿದೆ. ಒಂದೇ ಫೋಟೊ ವಿವಿಧ ಕಾಮಗಾರಿಗೆ ಬಳಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮಧ್ಯವರ್ತಿಗಳ ಹಾವಳಿ ಮತ್ತು ಕೆಲವರ ದುರಾಸೆಯಿಂದ ನರೇಗಾ ಯೋಜನೆ ದುರ್ಬಳಕೆಯಾಗಿದೆ. ನರೇಗಾ ಯೋಜನೆಯಡಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ಕೂಡಲೆ ಕ್ರಮ ಕೈಗೊಂಡು, ಸರ್ಕಾರಕ್ಕೆ ವಂಚಿಸಿರುವ ಹಣವನ್ನು ವಾಪಸ್ ಜಮಾ ಮಾಡಬೇಕು ಎಂದು ಪ್ರತಿಭಾಟನಾಕಾರರು ಒತ್ತಾಯಿಸಿದರು. ನರೇಗಾ ಎ.ಡಿ. ವೀರಣ್ಣ ಲಕ್ಕಣ್ಣನವರ್ ಇತರರಿದ್ದರು.