

ಹರಪನಹಳ್ಳಿ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕಲಿಕಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶದ ಉನ್ನತ ಸ್ಥಾನ-ಮಾನಗಳನ್ನು ಗಳಿಸಿದ್ದಾರೆಂದು ಮುಖ್ಯ ಶಿಕ್ಷಕ ಆರ್.ಜಿ.ಭೀಮ್‌ಸಿಂಗ್ ನಾಯ್ಕ ತಿಳಿಸಿದರು.
ತಾಲೂಕಿನ ಇಟ್ಟಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ ಹಾಗೂ ಉಚಿತವಾಗಿ ಸಾಹಿತ್ಯ, ಸಾಧಕರ ಕುರಿತ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಕ್ಕಳು ಹಲವಾರು ಕಾರಣಗಳಿಂದ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇದನ್ನು ತಪ್ಪಿಸಲು, ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸಲು ಶಿಕ್ಷಕರು ಪ್ರತಿವರ್ಷ ಸ್ವ-ಇಚ್ಛೆಯಿಂದ ವಿದ್ಯಾರ್ಥಿಗಳಿಗೆ ಜ್ಞಾನ ಸಂಪಾದನೆಗೆ ಪೂರಕವಾಗುವ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಈ ಬಾರಿ ಸಹ ಶಿಕ್ಷಕಿ ಶಿಲ್ಪಾ ಎಚ್.ಎಂ. ಅವರು ಪುಸ್ತಕ ವಿತರಿಸುತ್ತಿರುವುದು ಮಾದರಿ ನಡೆ ಎಂದರು.