ವಾಟರ್ ಆ್ಯಪಲ್ ಹೊಸತನದ ಕೃಷಿ

Harapanahalli water appele
ಹರಪನಹಳ್ಳಿ ತಾಲೂಕಿನ ಯರಬಳ್ಳಿಯ ರೈತ ಮನೋಹರ್ ವಿವಿಧ ಹಣ್ಣಿನ ಗಿಡಗಳನ್ನು ಬೆಳೆದಿರುವುದು.
Published on

ಬಿ.ವೈ.ದುರುಗೇಶ್ ಬಾಗಳಿ

ಹರಪನಹಳ್ಳಿ: ಭಾರತದ ಮಾರುಕಟ್ಟೆಯಲ್ಲಿ ವಾಟರ್ ಆ್ಯಪಲ್ ಹಣ್ಣು ಅಪರೂಪವಾಗಿದೆ. ಇದನ್ನು ಕೆಲೆವೆಡೆ ರೋಸ್ ಆ್ಯಪಲ್ ಎಂದು ಕೂಡ ಕರೆಯಲಾಗುತ್ತದೆ. ಈ ಹಣ್ಣಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆಯಿದೆ. ತಾಲೂಕಿನ ಯರಬಳ್ಳಿಯ ರೈತ ಮನೋಹರ್ ಈ ವಿಶೇಷ ಹಣ್ಣನ್ನು ಬೆಳೆದು ಭರಪೂರ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಯಾರೂ ವಾಟರ್ ಆ್ಯಪಲ್ ಬೆಳೆದಿಲ್ಲ. ರೈತ ಮನೋಹರ್ ಕೃಷಿಯಲ್ಲಿ ಹೊಸತನದ ಹಂಬಲದೊಂದಿಗೆ ಯುಟ್ಯೂಬ್ ಸಹಕಾರ ದಿಂದ ಮೂರು ಎಕರೆಯಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಒಂದು ಗಿಡಕ್ಕೆ 400 ರೂ.ಯಂತೆ ಆಂಧ್ರದ ರಾಜಮಂಡ್ರಿ ಹಾಗೂ ರಿಪ್ಪನ್‌ಪೇಟೆಯಿಂದ 110 ವಿವಿಧ ಬಗೆಯ ಗಿಡಗಳನ್ನು ತಂದಿದ್ದಾರೆ.

ವಾಟರ್ ಆ್ಯಪಲನ್ನು ನಾಲ್ಕು ವರ್ಷದಿಂದ 40 ವರ್ಷದವರೆಗೆ ನಿರಂತರವಾಗಿ ವರ್ಷದಲ್ಲಿ ಎರಡು ಬೆಳೆ ಪಡೆಯಬಹುದಾಗಿದೆ, ಒಂದೇ ಗಿಡದಲ್ಲಿ 10 ಸಾವಿರ ರೂ.ಗೂ ಅಧಿಕ ಹಣ ಸಂಪಾದಿಸಬಹುದು ಎನ್ನುತ್ತಾನೆ ರೈತ ಮನೋಹರ್. ವಾಟರ್ ಆ್ಯಪಲ್‌ನಲ್ಲಿ ವಿಟಮಿನ್ ಸಿ ಹೆಚ್ಚಿರುತ್ತದೆ. ಬಿಳಿರಕ್ತ ಕಣಗಳ ಉತ್ಪಾದನೆ ಮತ್ತು ಕಾರ್ಯವನ್ನು ಉತ್ತೇಜಿಸುವ ಮೂಲಕ ದೃಢವಾದ ಪ್ರತಿ ರಕ್ಷಣಾ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ.

ಇದು ಸೋಂಕುಗಳ ವಿರುದ್ಧ ಹೋರಾಟಕ್ಕೆ ದೇಹಕ್ಕೆ ಸಹಕಾರಿಯಾಗಿದೆ. ನಿಯಮಿತವಾಗಿ ಸೇವಿಸುವುದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣಿನ ಬೇಸಾಯಕ್ಕಾಗಿ ಆರಂಭದಲ್ಲಿ ಅಂದಾಜು 5 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ನಂತರದ ವರ್ಷಗಳಲ್ಲಿ ನಿರ್ವಹಣೆಗಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಹಣ್ಣಿನ ಬೇಸಾಯ ಲಾಭದಾಯಕವೆಂದು ಯುವ ರೈತರಿಗೆ ತೋರಿಸಿಕೊಟ್ಟಿದ್ದಾರೆ.

ಬೆಣ್ಣೆ ಹಣ್ಣಿನ 12 ಗಿಡ, ಸಪೋಟಾ 35, ಜಂಬು ನೇರಳೆ 27, ಹಲಸಿನ 25 ಗಿಡ, ನಿಂಬೆ 30, ಹನುಮ ಫಲ 15, ಚೆರ‌್ರಿ ಹಣ್ಣಿನ 18 ಗಿಡಗಳೊಂದಿಗೆ ಚಕ್ಕೋತ ಹಾಗೂ ಮಸಾಲೆ ಪದಾರ್ಥಗಳ ಗಿಡಗಳನ್ನು ಬೆಳೆಸಲಾಗಿದೆ.

ಬಹುವಾರ್ಷಿಕ ಬೆಳೆಗಾರರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ತೋಟಗಾರಿಕಾ ಇಲಾಖೆ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ಯೋಜನೆಗಳಿಂದ ರೈತರು ಆರ್ಥಿಕವಾಗಿ ಆದಾಯ ದ್ವಿಗುಣ ಗೊಳಿಸಿಕೊಳ್ಳಬಹುದು. | ಜಯಸಿಂಹ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಹರಪನಹಳ್ಳಿ

ಬಹುವಾರ್ಷಿಕ ಬೆಳೆಗಳಿಂದ ಸಾಕಷ್ಟು ಆದಾಯ ಪಡೆಯಬಹುದು. ಈ ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಔಷಧ ಸಿಂಪಡಿಸುವ ಅಗತ್ಯವಿಲ್ಲ ಸಾವಯವ ಗೊಬ್ಬರ ಬಳಕೆ ಮತ್ತು ಅತಿ ಕಡಿಮೆ ನೀರಿನಲ್ಲಿ ಈ ಬೆಳೆಗಳನ್ನು ಬೆಳೆದು ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ. ರೈತರು ದೀರ್ಘಕಾಲಿಕ ಬೆಳೆಗಳನ್ನು ಬೆಳೆಯಲು ಹೆಚ್ಚು ಒತ್ತು ನೀಡಬೇಕು. | ಮನೋಹರ್ ರೈತ, ಯರಬಳ್ಳಿ ವಾಟರ್ ಆ್ಯಪಲ್ ಗಿಡಗಳೊಂದಿಗೆ ರೈತ ಮನೋಹರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net