

ಹರಪನಹಳ್ಳಿ: ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಲುವಾಗಲು ಗ್ರಾಮದ 7ನೇ ವಾರ್ಡ್‌ನ ವಿನಾಯಕ ನಗರದ ರಸ್ತೆಯಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದ ಹಲವು ತಿಂಗಳುಗಳ ಹಿಂದೆ ನಿರ್ಮಿಸಿದ್ದ ಸಿಸಿ ರಸ್ತೆ ಮತ್ತು ಒಳ ಚರಂಡಿಯು ಉಬ್ಬು-ತಗ್ಗುಗಳಿಂದ ಕೂಡಿದ್ದು, ವಿನಾಯಕ ನಗರದ ನಿವಾಸಿಗಳ ಮನೆಯಂಗಳದಲ್ಲಿ ಎರಡು ಅಡಿ ಆಳದಷ್ಟು ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಇದರಿಂದಾಗಿ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಅವೈಜ್ಞಾನಿಕ ರಸ್ತೆ ನಿರ್ಮಿಸಿ ತೊಂದರೆ ಸೃಷ್ಟಿಸಿರುವ ಗುತ್ತಿಗಾರರ ಮತ್ತು ಪಿಡಿಒ ವಿರುದ್ಧ ಕಾಲನಿಯ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಸಮಸ್ಯೆಯನ್ನು ಸರಿಪಡಿಸುವಂತೆ ಗ್ರಹಿಸಿದ್ದಾರೆ. ಇಲ್ಲವಾದರೆ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
====
ಶಾಸಕರ ಅನುದಾನದಲ್ಲಿ ಆರು ತಿಂಗಳ ಹಿಂದೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು, ರಸ್ತೆ ನಿರ್ಮಾಣದ ವೇಳೆ ಇಂಜಿನಿಯರ್‌ಗಳು ಮಾಡಿರುವ ಎಡವಟ್ಟಿನಿಂದ ಏರಿಳಿತವಾಗಿದೆ. ನರೇಗಾ ಅಥವಾ ಶಾಸಕರ ಅನುದಾನ ಮಂಜೂರು ಮಾಡಿಸಿ ರಸ್ತೆ ಸರಿಪಡಿಸಲಾಗುವುದು.
> ಶಂಭುಲಿಂಗಯ್ಯ, ಪಿಡಿಒ, ಹಲುವಾಗಲು
====
ನಮ್ಮ ಕಾಲನಿಯಲ್ಲಿ ರಸ್ತೆ ನಿರ್ಮಾಣ ಸರಿಯಾಗಿಲ್ಲ. ಬೇಕಾಬಿಟ್ಟಿ ಕೆಲಸ ಮಾಡಿದ ಪರಿಣಾಮ ಬಡಾವಣೆ ಮನೆಯಂಗಳದಲ್ಲಿ ಕಲುಷಿತ ನೀರು ನಿಂತು ರೋಗ-ರುಜಿನಗಳಿಗೆ ಕಾರಣವಾಗಿದೆ. ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕಿದೆ.
> ಮಂಜುನಾಥ, ವಿನಾಯಕ ನಗರದ ನಿವಾಸಿ