

ಹರಪನಹಳ್ಳಿ: ಶಿಕ್ಷಣ ಹಾಗೂ ಆರ್ಥಿಕತೆಯ ಕಡೆಗೆ ಗಮನಹರಿಸಿದರೆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಶ್ರೀಗಳು ಹೇಳಿದರು.
ತಾಲೂಕಿನ ಕಂಚೀಕೆರೆ ಗ್ರಾಮದಲ್ಲಿ ಭಾನುವಾರ ಬೀರೇಶ್ವರ ಸ್ವಾಮಿ ಜಾತ್ರೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.
ಹಾಲುಮತ ಸಮುದಾಯ ಮುಖ್ಯವಾಹಿನಿಗೆ ಬರಲು ಮಕ್ಕಳಿಗೆ ಸಂಸ್ಕಾರ, ಗುಣಮಟ್ಟದ ಶಿಕ್ಷಣ ನೀಡಬೇಕು. ನ್ಯಾಯಯುತವಾಗಿ ಪ್ರತಿನಿತ್ಯ ದುಡಿಮೆ ಮಾಡಿ ಆರ್ಥಿಕವಾಗಿ ಪ್ರಬಲರಾಗಬೇಕು. ಹಣವನ್ನು ಯಾವ ರೀತಿ ಬಳಸಬೇಕು ಎನ್ನುವ ಸಾಮಾನ್ಯಜ್ಞಾನ ಇರಬೇಕು ಎಂದರು.
ಕೌಟುಂಬಿಕ ಕಲಹಗಳು, ಅಶಾಂತಿ ನೆಲೆಸಿದಲ್ಲಿ ಮನಸಿನ ನೆಮ್ಮದಿಗಾಗಿ ಪ್ರಾರ್ಥನೆ ಮಾಡಲು ದೇವಸ್ಥಾನಗಳು ಬೇಕು. ದೇವಸ್ಥಾನದ ಘಂಟೆ ಬಡಿಯುವುದೇ ಕಾಯಕವಾಗಬಾರದು. ಅದರ ಬದಲಾಗಿ ಶಾಲೆಗಳಲ್ಲಿಯ ಘಂಟೆ ಶಬ್ದ ಜ್ಞಾನದ ಬೆಳಕು ನೀಡುತ್ತದೆ. ಶಿಕ್ಷಣವಿದ್ದಾಗ ಸಮಾಜ, ರಾಜ್ಯ, ದೇಶಗಳ ಅಭಿವೃದ್ಧಿ ಸಾಧ್ಯ ಎಂದರು.
ಉಪನ್ಯಾಸಕ ಗುಳಿಯಪ್ಪ ಹುಲಿಮನಿ ಮಾತನಾಡಿ, ನಮ್ಮ ಸಮಾಜ ಇಂದಿಗೂ ಮುಂದುವರಿಯದೇ ಇರಲು ಶಿಕ್ಷಣದ ಕೊರತೆ ಕಾರಣ. ಮಕ್ಕಳಿಗೆ ತಪ್ಪದೆ ಉತ್ತಮ ಶಿಕ್ಷಣ ಕೊಡಿಸಬೇಕು. ಆರ್ಥಿಕ ವಾಗಿ ಮುಂದುವರಿಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಮುಖರಾದ ಎಚ್.ಬಿ.ಪರಶುರಾಮಪ್ಪ, ಎಂ.ನಾಗರಾಜ್, ಜೆ.ಮಂಜಪ್ಪ, ಕೆ.ಕೆಂಚಪ್ಪ, ಎಂ.ಹನುಮಂತಪ್ಪ, ಬಿ.ಅಂಜಿನಪ್ಪ, ಕೆಂಚನಗೌಡ, ಕೊಟ್ರೇಶ್, ಅಲ್ಲಾಬಕ್ಷಿ ಸಾಹೇಬ್, ಡಿ.ದೇವೇಂದ್ರಪ್ಪ, ಮುತ್ತಿಗೆ ಜಂಬಣ್ಣ, ವಕೀಲ ಗೋಣಿಬಸಪ್ಪ, ಛಲವಾದಿ ಹನುಮಂತಪ್ಪ, ವೆಂಕಟೇಶ್ ಬಾರಿಕರ, ಮಂಜಪ್ಪ, ಅರಸೀಕೆರೆ ಪಿಎಸ್‌ಐ ಕೆ.ರಂಗಯ್ಯ ಇತರರಿದ್ದರು.