ಜಿಲ್ಲಾ, ತಾಲೂಕು ಮಟ್ಟದ ಪಿಯು ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ರದ್ದು: ಸಚಿವ ಸುರೇಶ ಕುಮಾರ್ ಆದೇಶ

07032021 Harapanahalli Sports Cancel
Published on

ಹರಪನಹಳ್ಳಿ: ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಆದೇಶದ ಮೇರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪಪೂ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ರದ್ದುಪಡಿಸಲಾಗಿದೆ. ಪಟ್ಟಣದಲ್ಲಿ ಮಾ.9ರಂದು ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನೂ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ಜಿಲ್ಲಾ, ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಲು ಆಹ್ವಾನ ಪತ್ರಿಕೆ ಮುದ್ರಿಸಿ, ಆಹ್ವಾನಿತರಿಗೆ ನೀಡಿತ್ತು. ಆದರೆ, ಕರೊನಾ ಕಾರಣ ಕ್ರೀಡಾಕೂಟಗಳಲ್ಲಿ ಸರ್ಕಾರದ ಮಾರ್ಗಸೂಚನೆ ಪಾಲನೆ ಕಷ್ಟಸಾಧ್ಯವಾಗಲಿದೆ. ಅಲ್ಲದೆ ಸಿಇಟಿ, ನೀಟ್ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಕ್ರೀಡಾಕೂಟ ರದ್ದುಪಡಿಸಿ ಮಾ.5ರಂದು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.

ಹೀಗಾಗಿ ಮಾ.9ರಂದು ತಾಲೂಕಿನಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ ರದ್ದುಗೊಳಿಸಲಾಗಿದೆ ಎಂದು ಕ್ರೀಡಾ ಸಲಹಾ ಸಮಿತಿ ಸಂಚಾಲಕ ಅರುಣಕುಮಾರ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಕ್ರೀಡಾಕೂಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ಕ್ರೀಡಾಕೂಟ ನಡೆಯುವ ದಿನಾಂಕ ನಿಗದಿಪಡಿಸಿದ ಬಳಿಕ ತಿಳಿಸಲಾಗುವುದು ಎಂದು ಡಿಡಿಪಿಯು ಬಿ.ಆರ್.ನಾಗರಾಜಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net