

ಹರಪನಹಳ್ಳಿ : ಪಟ್ಟಣದ ತಾಲೂಕು ಕಚೇರಿ ಹಾಗೂ ತಾಲೂಕು ಆಸ್ಪತ್ರೆಗೆ ಮಂಗಳವಾರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ದಿಢೀರ್ ಭೇಟಿ ನೀಡಿ, ಮೂಲ ಸೌಲಭ್ಯ, ದಾಖಲೆ ಪರಿಶೀಲನೆ ಹಾಗೂ ಜನರ ಸಮಸ್ಯೆ ಆಲಿಸಿದರು.
ಜಿಲ್ಲೆಯಲ್ಲಿ ಒಟ್ಟು 9326 ಪಡಿತರ ಚೀಟಿಗಳು ತಾತ್ಕಾಲಿಕ ರದ್ದಾಗಿದ್ದು, ಈಗಾಗಲೇ ಪರಿಶೀಲಿಸಿ ಹಿಂಪಡೆಯಲಾಗಿದೆ. ಒಂದು ಲಕ್ಷ ರೂ. ಗೂ ಅಧಿಕ ವಾರ್ಷಿಕ ಆದಾಯವಿದ್ದವರು ಹಾಗೂ 101 ಜನರು ಸರ್ಕಾರಿ ನೌಕರರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಈಗಾಗಲೇ ರದ್ದಾಗಿದ್ದ ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್‌ಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದೆ. ಮುಂದಿನ ತಿಂಗಳಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ ಎಂದು ಡಿಸಿ ದಿವಾಕರ ತಿಳಿಸಿದರು.
ಚುನಾವಣೆಯ ಶಾಖೆಯ ಕೊಠಡಿಗೆ ಭೇಟಿ ನೀಡಿ, ಇಪಿ ರೇಷಿಯೋ ಎಷ್ಟಿದೆ ಎಂದು ಸಂಬಂಧಿಸಿದ ಅಧಿಕಾರಿಗೆ ಕೇಳಿದರು. ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇಷ್ಟು ದಡ್ಡತನವಿರುವವರು ಇದ್ದರೆ ಹೇಗೆ, ಯೂಸ್ ಲೆಸ್ ಫೆಲೋ ಎಂದು ಗದರಿಸಿದರು. ನಂತರ ಸಾರ್ವಜನಿಕರ ಅಹವಾಲು ಆಲಿಸಿ, ಹಲವು ದಿನಗಳಿಂದ ಅಲೆದಾಡುತ್ತಿರುವವರ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಸ್ಥಳದಲ್ಲಿಯೇ ಇತ್ಯರ್ಥಪಡಿಸಿದರು. ತದನಂತರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ವಾರ್ಡ್‌ಗಳಿಗೆ ತೆರಳಿ ಹೇಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದ ಕುರಿತು ಮಾಹಿತಿ ಪಡೆದರು. ಔಷಧ ತರಲು ಹೊರಗೆ ಬರೆದು ಕೊಡದಿರಿ. ಕೊರತೆ ಇದ್ದರೆ ಔಷಧಗಳ ಪಟ್ಟಿ ನೀಡಿದರೆ ಪೂರೈಸಲಾಗುವುದು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ಕೊಡದೆ ಸೂಕ್ತ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಸೂಚಿಸಿದರು. ಆ ನಂತರ ದೇವರ ತಿಮ್ಮಲಾಪುರ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಮೂಲ ಸೌಲಭ್ಯಗಳ ಬಗೆಗೆ ಪರಿಶೀಲಿಸಿದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸುಧಾರಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಡಿಸಿ ದಿವಾಕರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಲ್ಲಿ 1800 ಮಕ್ಕಳು ಶಾಲೆಗೆ ಗೈರಾಗುತ್ತಿದ್ದು, 4600 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇವರನ್ನು ಗುರಿಯಾಗಿಸಿಕೊಂಡು, 336 ಶಾಲೆಗಳ ಎಲ್ಲ ವಿಷಯಗಳ ಶಿಕ್ಷಕರಿಗೆ ಮಕ್ಕಳ ಶಿಕ್ಷಣ ಮಟ್ಟವನ್ನು ಯಾವ ರೀತಿಯಾಗಿ ಸುಧಾರಿಸಬೇಕು ಎನ್ನುವುದರ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಪ್ರತಿನಿತ್ಯ ಒಂದೊಂದು ಶಾಲೆಗೆ ಮಾಹಿತಿ ನೀಡದೆ ಭೇಟಿ ನೀಡಿ, ಪರಿಶೀಲಿಸಲ ಸಿಆರ್‌ಪಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.