

ಹರಪನಹಳ್ಳಿ: ಒಳಮೀಸಲಾತಿ ಹಂಚಿಕೆಯಲ್ಲಿ ಬಲಾಢ್ಯರ ಪರವಾಗಿರುವ ಸರ್ಕಾರದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಅ.2 ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ರಾಜ್ಯ ಎಸ್ಸಿ-ಎಸ್ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ವಿ.ಸಣ್ಣ ಅಜ್ಜಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಕೇವಲ ಒಂದು ಪರ್ಸೆಂಟ್ ಮೀಸಲಾತಿ ಕೇಳಿದ ನಮ್ಮ ಸಮುದಾಯವನ್ನು ನಿರ್ಲಕ್ಷೃ ಮಾಡಿದಕ್ಕೆ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗಿದ್ದೇವೆ.
ಒಂದು ವೇಳೆ ನಮ್ಮ ಬೇಡಿಕೆಗಳು ಸಾಕಾರಗೊಳ್ಳದಿದ್ದಲ್ಲಿ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲಿದ್ದೇವೆ. ನಮ್ಮ ಸಮುದಾಯ ವಾಸವಾಗಿರುವ ಗ್ರಾಮಗಳಲ್ಲಿ ರಾಜಕಾರಣಿಗಳು ಮತ ಕೇಳಲು ಬರದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಒಳಮೀಸಲಾತಿ ವಂಚಿತ 49 ಅಲೆಮಾರಿ ಸಮುದಾಯಗಳು ಮತ್ತು ಅತಿ ಸೂಕ್ಷ್ಮಪರಿಶಿಷ್ಟ ಜಾತಿಗಳ ಐಕ್ಯ ಸಂಘಟನೆ ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವನಿ ಇಲ್ಲದವರನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ.
ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಅಲೆಮಾರಿ ಸಮುದಾಯಗಳನ್ನು ಗುಡಿಸಲುಮುಕ್ತ, ಭಿಕ್ಷೆಮುಕ್ತ ಮಾಡುವ ಭರವಸೆ ನೀಡಿದ್ದರು. ಆದರೆ, ಇದೀಗ ದಮನಗೊಳಿಸುತ್ತಿದ್ದಾರೆ. ದೆಹಲಿಯ ಪ್ರತಿಭಟನೆ ವೇಳೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಮ್ಮ ಸಮಸ್ಯೆಗಳನ್ನು ಆಲಿಸಲು ಬರಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಕಚೇರಿಗೆ ನುಗ್ಗುತ್ತೇವೆ ಎಂದರು. ಪ್ರಮುಖರಾದ ದೊಂಬರ ಕೊಟ್ರೇಶ್, ರಾಜಕುಮಾರ, ಸಿದ್ದಣ್ಣ ಮಾತನಾಡಿದರು.