ಜನರ ದಿಕ್ಕು ತಪ್ಪಿಸಿದವರೇ ಲಸಿಕೆ ಹಾಕಿಸಿಕೊಳ್ತಾರೆ: ಹರಪನಹಳ್ಳಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿಕೆ

05062021 Harapanahalli MP G M Siddeshwar
Published on

ಹರಪನಹಳ್ಳಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಜನರ ದಿಕ್ಕು ತಪ್ಪಿಸಿದವರೇ ಈಗ ಸರದಿಯಲ್ಲಿ ನಿಂತು ವ್ಯಾಕ್ಸಿನ್ ಪಡೆಯುತ್ತಿದ್ದಾರೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ವ್ಯಂಗ್ಯವಾಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕರೊನಾ ಕ್ಲಿಷ್ಟಕರ ಪರಿಸ್ಥಿತಿಯನ್ನು ರಾಜಕೀಯ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವ ಆಲೋಚನೆ ಬಿಟ್ಟು ಅಮೂಲ್ಯ ಜೀವ ಉಳಿವಿಗಾಗಿ ಲಸಿಕೆ ಹಾಕಿಸಿ, ಕೋವಿಡ್ ನಿಯಮ ಪಾಲಿಸಲು ಸಲಹೆ ನೀಡಬೇಕು ಎಂದರು. ಜಿ.ಮಲ್ಲಿಕಾರ್ಜುನ ಹಾಲಮ್ಮ ಚಾರಿಟಬಲ್ ಟ್ರಸ್ಟ್‌ನಿಂದ 60ಲಕ್ಷ ರೂ.ವೆಚ್ಚದಲ್ಲಿ ಪ್ರಾಣವಾಯು ಉತ್ಪಾದನಾ ಘಟಕ ನಿರ್ಮಿಸುತ್ತಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ನನ್ನ ಕ್ಷೇತ್ರದ 6 ತಾಲೂಕುಗಳಲ್ಲಿ ವೈಯಕ್ತಿಕವಾಗಿ 3 ಘಟಕ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಕೋವಿಡ್ ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಯ ದಂತ ವೈದ್ಯರ ವರ್ತನೆ ಕುರಿತು ಜನರಿಂದ ದೂರುಗಳು ಬರುತ್ತಿದ್ದು, ಕ್ರಮ ಕೈಗೊಳ್ಳುವಂತೆ ಡಿಸಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಮಾತನಾಡಿ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಪ್ರಾಣವಾಯು ಘಟಕ ಸ್ಥಾಪನೆಯಿಂದ 100 ಹಾಸಿಗೆ, 10 ಐಸಿಯು ಘಟಕ ಚಿಕಿತ್ಸೆಗೆ ಸಿದ್ಧವಿದ್ದು, ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಪೌಷ್ಟಿಕದಿಂದ ಕೂಡಿದ 130 ಮಕ್ಕಳು ಹಾಗೂ ಅವರ ತಾಯಂದಿರಿಗೆ 20 ದಿನಗಳ ಕಾಲ ಪ್ರತ್ಯೇಕವಾಗಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಕೋವಿಡ್ ನಿರ್ವಹಣೆಗಾಗಿ ಶಾಸಕರ 50 ಲಕ್ಷ ರೂ. ಅನುದಾನ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಸದಸ್ಯರಾದ ಕಿರಣ್ ಶ್ಯಾನಭಾಗ್, ಎಚ್.ಎಂ.ಅಶೋಕ, ಮುಖಂಡರಾದ ಎಂ.ಪಿ.ನಾಯ್ಕ, ಸತ್ತೂರು ಹಾಲೇಶ್, ಜಿ.ನಂಜನಗೌಡ್ರು, ಅರುಂಡಿ ನಾಗರಾಜ, ಬಾಗಳಿ ಕೊಟ್ರೇಶ್, ಕಣಿವಿಹಳ್ಳಿ ಮಂಜುನಾಥ, ಶೃಂಗಾರತೋಟ ನಿಂಗರಾಜ, ಓಂಕಾರಗೌಡ, ರಾಘವೇಂದ್ರ ಶ್ರೇಷ್ಠಿ, ಕೆ.ಲಕ್ಷ್ಮಣ, ನಿಟ್ಟೂರು ಹಾಲಪ್ಪ, ಕೆ.ಕರೆಗೌಡ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net