

ಹರಪನಹಳ್ಳಿ: ಚಿರಸ್ತಹಳ್ಳಿ ಗ್ರಾಮದಲ್ಲಿ ಹರಪನಹಳ್ಳಿ ಪಾಳೇಗಾರರ ಅಪ್ರಕಟಿತ ಶಿಲಾ ಶಾಸನ ಪತ್ತೆಯಾಗಿದೆ. ಎಂ.ಪಿ.ವೀಣಾ ಮಹಾಂತೇಶ್ ಅವರು ಇತ್ತೀಚಿಗೆ ಮಲ್ಲಿಕಾರ್ಜುನಸ್ವಾಮಿ ಕಲ್ಮಠ, ರೇಣುಕಾಪ್ರಸಾದ್, ಡಾ.ರವಿಕುಮಾರ್ ನವಲಗುಂದ, ಹಾಗೂ ಡಾ.ವೀರೇಶ್ ಅವರೊಂದಿಗೆ ಕ್ಷೇತ್ರ ಕಾರ್ಯ ಕೈಗೊಂಡಾಗ ಬಸವೇಶ್ವರ ದೇವಾಲಯದ ಬಳಿ ಶಾಸನ ಪತ್ತೆಯಾಗಿದೆ.
ಈ ಶಾಸನ ಎರಡು ಅಡಿ ಎತ್ತರ-ಅಗಲವಾಗಿದ್ದು, 6 ಸಾಲು ಹೊಂದಿದೆ. ಶಾಸನದ ಮೇಲ್ಭಾಗದ ಮಧ್ಯದಲ್ಲಿ ಶಿವಲಿಂಗ ಅಕ್ಕ-ಪಕ್ಕದಲ್ಲಿ ಸೂರ್ಯ ಚಂದ್ರರ ರೇಖಾ ಚಿತ್ರಗಳಿವೆ. ಶಾಸನದಲ್ಲಿ ಅರಸಿನ ಮಠದ ಚನ್ನಬಸವನ ಹಾಗೂ ಇಮ್ಮಡಿ ಬಸವಂತರಾಯ ಅವರ ಉಲ್ಲೇಖವಿದೆ. ಇಮ್ಮಡಿ ಬಸವಂತರಾಯ ಅಥವಾ ಇಮ್ಮಡಿ ಬಸವಂತನಾಯಕ ಹರಪನಹಳ್ಳಿ ಪಾಳೆಗಾರರ ಪೈಕಿ ಒಬ್ಬರಾಗಿದ್ದಾರೆ. ಇವರ ಆಳ್ವಿಕೆಯ ಕಾಲ ಕ್ರಿ.ಶ.1715 ರಿಂದ ಕ್ರಿ.ಶ.1716 ಎಂದು ಗುರುತಿಸಲಾಗಿದೆ.
ಎರಡನೇ ಬಸವಂತ ನಾಯಕನ ಹೆಂಡತಿ ಹರಿಯಮ್ಮಾಜಿ, ತನ್ನ ಪತಿ ಮರಣದ ನಂತರ ಐದು ವಷರ್ ಆಳ್ವಿಕೆ ಮಾಡಿದಳು, ದಂಪತಿ ಅನೇಕ ದಾನ-ಧರ್ಮಗಳನ್ನು ಕೈಗೊಂಡಿರುವುದು ಕಂಚಿನ ಪತ್ರ, ಹಸ್ತ ಪ್ರತಿ ಮತ್ತು ಶಾಸನಗಳಿಂದ ತಿಳಿದು ಬರುತ್ತದೆ.