

ಹರಪನಹಳ್ಳಿ: ಅಸಂಘಟಿತ ಸಮುದಾಯಗಳು ಒಂದಾದರೆ ಎಲ್ಲ ರಂಗದಲ್ಲೂ ಹಿಂದುಳಿದ ಜನಾಂಗದವರು ಆಡಳಿತ ಮಾಡಬಹುದು ಎಂದು ದಾವಣಗೆರೆ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡ ಎ.ಬಿ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸಮತಾ ರೆರ್ಸಾಟ್‌ನಲ್ಲಿ ಹಿಂದುಳಿದ ವರ್ಗಗಳ ಜಾತಿ ಜನಗಣತಿ ಪಟ್ಟಿ ಬಿಡುಗಡೆಗೆ ಒತ್ತಾಯಿಸಿ ಸೆ.29ರಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈಗೊಂಡಿರುವ ಧರಣಿ ನಿಮಿತ್ತ ದಾವಣಗೆರೆ ಅಹಿಂದ ಜಿಲ್ಲಾ ಘಟಕ ಹಾಗೂ ತಾಲೂಕಿನ ಅಹಿಂದ ಮುಖಂಡರು ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಹಿಂದಳಿದವರನ್ನು ಒಂದುಗೂಡಲು ಬಿಡದ ಶೇ.2ರಷ್ಟಿರುವ ಮೇಲಜಾತಿಯವರು, ನಮ್ಮಲ್ಲಿ ಸಂಘರ್ಷ ಸೃಷ್ಟಿಸಿ ಆಳುತ್ತಿದ್ದಾರೆ. ಶೋಷಿತರಿಗೆ ಸಂವಿಧಾನ ಮತದಾನದ ಹಕ್ಕು ನೀಡದಿದ್ದರೆ ಕಷ್ಟವಾಗುತ್ತಿತ್ತು. ಇನ್ನಾದರೂ ಜಾಗೃತರಾಗಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಹಿಂದಳಿದ ಜಾತಿಗಳ ಒಕ್ಕೂಟದ ಕಾರ್ಯದರ್ಶಿ ರಾಜಕುಮಾರ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷಾ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. 2ಎ ಮೀಸಲಾತಿ ಪಟ್ಟಿಗೆ ಅರ್ಥಿಕ ಹಾಗೂ ಸಾಮಾಜಿಕ ಶೈಕ್ಷಣಿಕವಾಗಿ ಪ್ರಬಲವಾಗಿರುವ ಜಾತಿಗಳನ್ನು ಸೇರಿಸಬಾರದು. ಹೀಗಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸೆ.29ರಂದು ದಾವಣಗೆರೆ ಡಿಸಿ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಪಂ ಮಾಜಿ ಸದಸ್ಯ ಎಚ್.ಬಿ.ಪರಶುರಾಮಪ್ಪ, ಪುರಸಭೆ ಸದಸ್ಯ ಜಾಕೀರ್ ಸರಖಾವಸ್, ಭರತ, ಮುಖಂಡರಾದ ಎಚ್.ಕೆ.ಹಾಲೇಶ್, ಆರ್.ಹನುಮಂತಪ್ಪ, ಭೀಮಣ್ಣ ಶಂಕರನಹಳ್ಳಿ, ಕೋರಿಶೆಟ್ಟಿ ಉಚ್ಚಂಗೆಪ್ಪ, ಆಲದಹಳ್ಳಿ ಷಣ್ಮುಮುಖಪ್ಪ, ಅರುಣ ಪೂಜಾರ ಇತರರಿದ್ದರು.