

ಹರಪನಹಳ್ಳಿ: ರೋಹಿಣಿ ಮಳೆಯಾದರೆ ಊರು ತುಂಬ ಜೋಳ ಎನ್ನುವ ಗಾದೆ ಮಾತಿನಂತೆ ತಾಲೂಕಿನಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ.
ತಾಲೂಕಿನ ಹಲವೆಡೆ ಈಗಾಗಲೇ ನಾಲ್ಕು ಬಾರಿ ಮಳೆಯಾಗಿದ್ದು, ಇದರಿಂದ ಭೂಮಿ ಹಸಿಯಾಗಿದೆ. ರೈತರ ಕೃಷಿ ಚಟುವಟಿಕೆಗಳು ಗರಿಗೆದರಿ ಶೇ. 60 ಜಮೀನುಗಳಲ್ಲಿ ಮಾಗಿ ಉಳುಮೆ ಮಾಡಲಾಗಿದ್ದು, ಬಿತ್ತನೆಗಾಗಿ ಸಜ್ಜು ಮಾಡಿಕೊಂಡಿದ್ದಾರೆ.
ಉತ್ತಮ ಮಳೆಯಾದ ಗ್ರಾಮಗಳಲ್ಲಿ ರೈತರು ಮಾಗಿ ಉಳುಮೆ ಮುಗಿಸಿ, ಇದೀಗ ಬಿತ್ತನೆಗೆ ಬೇಕಾದ ರಸಗೊಬ್ಬರ, ಬೀಜಗಳನ್ನು ಖರೀದಿಸಲು ಮುಂದಾಗಿದ್ದಾರೆ. ಕಳೆದ ಬಾರಿ 84 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಇದೀಗ ಮಳೆಯಾದ ಕೂಡಲೇ ಜೋಳ, ಹೆಸರು, ಮೆಕ್ಕೆಜೋಳ, ತೊಗರಿ ಬಿತ್ತನೆಗೆ ಸಕಾಲವಾಗಿದೆ.
ಅನೇಕ ರೈತರು ವ್ಯವಸಾಯಗಳಿಗೆ ಎತ್ತುಗಳನ್ನು ಬಳಸುತ್ತಿದ್ದರೂ ಇದೀಗ ಎತ್ತುಗಳು ದುಬಾರಿಯಾಗಿವೆ. ಅಲ್ಲದೇ ಸಕಾಲಕ್ಕೆ ಮೇವು ಸಿಗದೆ ಸಾಕುವುದು ಕಷ್ಟವಾಗಿದೆ. ಹೀಗಾಗಿ ಯಂತ್ರಗಳ ಮೂಲಕ ಬಿತ್ತನೆ ಸೇರಿ ಕೃಷಿ ಚಟುವಟಿಕೆ ಮಾಡಲಾಗುತ್ತಿದೆ. ಕೆಲವು ರೈತರಿಗೆ ಟ್ರಾೃಕ್ಟರ್ ಸಿಗದೆ ಬಿತ್ತುವ ಕೆಲಸ ಮುಂದೂಡುತ್ತಿದ್ದಾರೆ.
ರಸಗೊಬ್ಬರ, ಬೀಜ ದಾಸ್ತಾನು ಇದೆ: ಹರಪನಹಳ್ಳಿ, ಚಿಗಟೇರಿ, ಅರಸಿಕೇರಿ ಮತ್ತು ತೆಲಿಗಿ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ರೈತರಿಗೆ ಆಗುವಷ್ಟು ಬಿತ್ತನೆಯ ಬೀಜಗಳಿದ್ದು, ಎಲ್ಲ ಕಡೆಗಳಲ್ಲಿ ಗೊಬ್ಬರ ದಾಸ್ತಾನು ಮಾಡಲಾಗಿದೆ. ಯಾವುದೇ ಕೊರತೆಯಾಗದಂತೆ ಕೃಷಿ ಇಲಾಖೆ ಗಮನ ಹರಿಸಿದ್ದರೂ ರೈತರು ಮಾತ್ರ ಆಗ್ರೋ ಕೇಂದ್ರಗಳಲ್ಲಿ ಈಗಾಗಲೇ ರಸಗೊಬ್ಬರ, ಬೀಜ ಖರೀದಿಸಿ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಕೃಷಿ ಚಟುವಟಿಕೆ ಆರಂಭವಾಗಿವೆ. ತಾಲೂಕಿನಲ್ಲಿ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲ. ಕರೊನಾ ಕಾರಣಕ್ಕೆ ದಾವಣಗೆರೆಗೆ ಹೋಗುವುದನ್ನು ನಿರ್ಬಂಧಿಸಲು ಕೃಷಿ ಪರಿಕರ ಮಾರಾಟಗಾರರ ಸಭೆ ಕರೆದು ಹರಪನಹಳ್ಳಿ ತಾಲೂಕಿನಲ್ಲಿ ಮಾರಾಟ ಮಾಡುವಂತೆ ಸೂಚಿಸಲಾಗುವುದು ಎನ್ನುತ್ತಾರೆ ಹರಪನಹಳ್ಳಿಯ ಸಹಾಯಕ ಕೃಷಿ ನಿರ್ದೇಶಕ ಜಿ.ಮಂಜುನಾಥ.
ಉತ್ತಮ ಮಳೆಯಾಗಿದ್ದು 2 ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತುತ್ತಿದ್ದೇವೆ. ಉಳಿದಂತೆ ಜೋಳವನ್ನು ರೋಹಿಣಿ ಮಳೆಯಾದ ಮೇಲೆ ಬಿತ್ತನೆ ಮಾಡುತ್ತೇವೆ ಎನ್ನುತ್ತಾರೆ ಬಾಗಳಿಯ ರೈತ ಬೆನಕಪ್ಪ.