

ಹರಪನಹಳ್ಳಿ: ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಯುಸಿಸಿಎಂಎಸ್ ದಾಖಲಾತಿ ದತ್ತಾಂಶ ಸರಿಪಡಿಸದೆ ಇದೇ ತಿಂಗಳು ಪರೀಕ್ಷೆ ನಿಗದಿ ಮಾಡಿರುವ ವಿಎಸ್‌ಕೆ ವಿವಿ ನಡೆ ಖಂಡನೀಯ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಹೇಳಿದರು.
ಯುಸಿಸಿಎಂಎಸ್ ದಾಖಲಾತಿ ದತ್ತಾಂಶದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಬಿ.ವಿ.ಗಿರೀಶಬಾಬುಗೆ ಟಿಎಂಎಇ ಸಂಸ್ಥೆಯ ಬಿ.ಇಡಿ ಶಿಕ್ಷಣಾರ್ಥಿಗಳು, ಎಬಿವಿಪಿ ಹಾಗೂ ಅಖಿಲ ಭಾರತ ಕಿಸಾನ್ ಸಭಾ ಪದಾಧಿಕಾರಿಗಳು ಮನವಿ ಸಲ್ಲಿಸಿದ ಬಳಿಕ ಗುರುವಾರ ಮಾತನಾಡಿದರು.
ಯುಸಿಸಿಎಂಎಸ್ ದತ್ತಾಂಶದ ಲೋಪದಿಂದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಹಾಗೂ ಆತಂಕ ಉಂಟಾಗಿದ್ದು, ವಿಶ್ವವಿದ್ಯಾಲಯ ಇದನ್ನು ಗಂಭಿರವಾಗಿ ಪರಿಗಣಿಸಿ ಸಮಸ್ಯೆಯನ್ನು ಸರಿಪಡಿಸಿದ ನಂತರ ಪರೀಕ್ಷೆಗಳನ್ನು ನಡೆಸಬೇಕು. ಇಲ್ಲವಾದರೆ, ವಿದ್ಯಾರ್ಥಿ ಸಂಘಟನೆಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಮೊದಲು ದಾವಣಗೆರೆ ವಿವಿಗೆ ವ್ಯಾಪ್ತಿಗಿದ್ದಾಗ ಪ್ರಶಿಕ್ಷಣಾರ್ಥಿಗಳ ನೋಂದಣಿ ಶುಲ್ಕ ಕಡಿಮೆ ಇತ್ತು ಮತ್ತು ಶಿಕ್ಷಣಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳು ಇದ್ದಿಲ್ಲ. ಆದರೆ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡಾಗಿನಿಂದ ನಿರಂತರ ಗೊಂದಲಗಳಾಗುತ್ತಿವೆ. ಆದ್ದರಿಂದ ಪುನಃ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸೇರಿಸಲು ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ ಎಂದರು.