

ಹರಪನಹಳ್ಳಿ: ತಾಲೂಕಿನ ನಿಚ್ಚವ್ವನಹಳ್ಳಿ ಗ್ರಾಪಂ ವ್ಯಾಪ್ತಿಯ ಅಡವಿ ಮಲ್ಲಾಪುರ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ನಿವಾಸಿಗಳು ಸಮಸ್ಯೆಗಳ ನಡುವೆ ಬದುಕು ಸಾಗಿಸುವಂತಾಗಿದೆ.
150 ಮನೆಗಳಿರುವ ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರೇ ಹೆಚ್ಚಿದ್ದಾರೆ. ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಅವಧಿಯಲ್ಲಿ ಗ್ರಾಮದಲ್ಲಿ ಅಲ್ಪ-ಸ್ವಲ್ಪ ರಸ್ತೆಯಾಗಿದ್ದು ಬಿಟ್ಟರೆ ಅಂದಿನಿಂದ ಈವರೆಗೂ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ.
ಕಲುಷಿತ ನೀರಿನಿಂದ ದುರ್ನಾತ: ಗ್ರಾಮದ ಓಣಿಗಳಲ್ಲಿ ಎಂಟತ್ತು ವರ್ಷಗಳ ಹಿಂದೆ ನಿರ್ಮಿಸಿದ್ದ ಸಿಸಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆಯೂ ಇಲ್ಲ. ಮಳೆನೀರು, ಬಳಕೆ ನೀರು ಹರಿಯಲು ವ್ಯವಸ್ಥೆ ಇಲ್ಲವಾಗಿದ್ದರಿಂದ ದುರ್ನಾತ ಬೀರುತ್ತಿದೆ.
ಇನ್ನು ಗ್ರಾಮದ ಯರಬಾಳು ರಸ್ತೆಯಿಂದ ಧರ್ಮಪ್ಪನ ಮನೆವರೆಗೆ ದುರ್ವಾಸನೆ ಬೀರುವ ಕಲುಷಿತ ನೀರಿನಲ್ಲೇ ಗ್ರಾಮಸ್ಥರು ನಿತ್ಯ ಓಡಾಡುವ ಪರಿಸ್ಥಿತಿ ಇದ್ದು, ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲೇ ಇಲ್ಲಿನ ಜನರು ಕಾಲ ಕಳೆಯುತ್ತಿದ್ದಾರೆ.
ಕೊಳಚೆ ನೀರು ಮಿಶ್ರಣದ ಭೀತಿ: ಕುಡಿವ ನೀರಿಗಾಗಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗಳ ಮುಂದೆ ನಲ್ಲಿಗಳನ್ನು ಅಳವಡಿಸಲಾಗಿದೆ. ಆದರೆ, ಪಕ್ಕದಲ್ಲಿಯೇ ನಿಂತ ಕೊಳಚೆ ನೀರು ಕುಡಿವ ನೀರಿನಲ್ಲಿ ಮಿಶ್ರಣವಾಗುವ ಸಾಧ್ಯತೆ ಇದೆ. ಹೀಗಿದ್ದರೂ ಜನರು ದಿನನಿತ್ಯದ ಬಳಸಲು ಹಾಗೂ ಕುಡಿಯಲು ಇದೇ ನೀರು ಅನಿವಾರ್ಯವಾಗಿದೆ.
ಅಧಿಕಾರಿಗಳ ನಿರ್ಲಕ್ಷೃ: ಕಳೆದ ನಾಲ್ಕೈದು ವರ್ಷಗಳ ಹಿಂದೆ ತಹಸೀಲ್ದಾರ್ ಅವರೇ ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಹದಗೆಟ್ಟ ರಸ್ತೆ ಹಾಗೂ ನಿಂತ ಕೊಳಚೆ ನೀರನ್ನು ನೋಡಿಕೊಂಡು ಹೋಗಿ, ಸಮಸ್ಯೆಯನ್ನು ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, ಈತನಕ ಅಭಿವೃದ್ಧಿಯಾಗಿಲ್ಲ. ಅಲ್ಲದೇ, ಪಿಡಿಒಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರಿಸಿಲ್ಲ. ಕಳೆದ ಮಾರ್ಚ್‌ನಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿ ಹೋಗಿದ್ದರು. ಆದರೆ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಅಳವಡಿಸಿದ್ದ ನಾಮಫಲಕವು ಕಾಣುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಟ್ರಾೃಕ್ಟರ್‌ನಲ್ಲಿ ವಿದ್ಯಾರ್ಥಿಗಳ ಸವಾರಿ
ಗ್ರಾಮದಲ್ಲಿ ಒಂದರಿಂದ ಏಳನೇ ತರಗತಿವರೆಗೆ ಶಾಲೆಯಿದೆ. ಮುಖ್ಯ ಶಿಕ್ಷಕರ ಕೋಣೆಯಲ್ಲಿ ದಿನಸಿ ದಾಸ್ತಾನು ಮತ್ತು ಅಡುಗೆ ಕಾರ್ಯ ನಡೆಯುತ್ತಿದೆ. ಇನ್ನು ಪ್ರೌಢ ಶಿಕ್ಷಣಕ್ಕಾಗಿ ಐದು ಕಿ.ಮೀ. ದೂರದ ಅರಸೀಕೆರೆಗೆ ಕಾಲ್ನಡಿಗೆಯಲ್ಲೇ ಸಾಗಬೇಕಿದೆ. ಕೆಲವರು ಬೈಕ್ ಹಾಗೂ ಕೃಷಿ ಚಟುವಟಿಕೆಗಳಿಗೆ ತೆರಳುವ ಟ್ರ್ಯಾಕ್ಟರ್ ಹಾಗೂ ಖಾಸಗಿ ವಾಹನಗಳಿಗೆ ಕೈ ಮಾಡಿ ತೆರಳುವ ಸ್ಥಿತಿ ಇದೆ. ಸಾರಿಗೆ ಸೌಲಭ್ಯವಿಲ್ಲದೆ ಗ್ರಾಮಸ್ಥರಿಗೂ ತೊಂದರೆಯಾಗಿದೆ. ಮುಖ್ಯವಾಗಿ ಮೂಲ ಸೌಕರ್ಯ ಕೊರತೆಯಿಂದಲೇ ಪ್ರತಿಭಾವಂತ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಶ್ವಾಸನೆಗೆ ಸೀಮಿತರಾಗದೇ ಅಡವಿ ಮಲ್ಲಾಪುರದ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ.
====
ಗ್ರಾಮದ ಒಳಚರಂಡಿ ನಿರ್ಮಾಣಕ್ಕೆ ಶಾಸಕರು ಈಗಾಗಲೇ ಹಣ ಮಂಜೂರು ಮಾಡಿದ್ದು, ಸದ್ಯದಲ್ಲೇ ಕೆಲಸವನ್ನು ಪ್ರಾರಂಭಿಸಲಾಗುವುದು. ಶಾಲೆಯ ಅಡುಗೆ ಕೋಣೆಯು ಶಿಥಿಲಗೊಂಡಿದ್ದು, ಅದರ ಕಾರ್ಯವನ್ನು ಪ್ರಾರಂಭಿಸಲು ಈಗಾಗಲೆ ಸಾಮಗ್ರಿಗಳನ್ನು ತರಿಸಲಾಗಿದೆ.
> ಆನಂದ ಕುಮಾರ್, ಪಿಡಿಒ, ನಿಚ್ಚವ್ವನಹಳ್ಳಿ ಗ್ರಾಪಂ
====
ಹಲವು ವರ್ಷಗಳಿಂದ ಗ್ರಾಮದಲ್ಲಿ ಸಮರ್ಪಕ ಚರಂಡಿ ಇಲ್ಲದೆ ಕಲುಷಿತ ನೀರು ಗ್ರಾಮದ ಸುತ್ತ ಹರಡಿ, ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗಳಿಂದ ಪ್ರತಿ ವರ್ಷ ಬಳಲುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಕ್ಕೆ ಭೇಟಿ, ಮೂಲ ಸೌಕರ್ಯ ಒದಗಿಸಬೇಕಿದೆ.
> ಶಿವಣ್ಣ, ಗ್ರಾಮಸ್ಥ, ಅಡವಿ ಮಲ್ಲಾಪುರ.