ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ನಿರ್ಧಾರ

harangi water advisory committee meeting
Published on

ಮೈಸೂರು: ಹಾರಂಗಿ ಜಲಾಶಯದಿಂದ ಕಟ್ಟು ಪದ್ಧತಿಯಡಿ (15 ದಿನ ನೀರು ಹರಿಸುವುದು, 15 ದಿನ ಸ್ಥಗಿತ) ಭಾನುವಾರದಿಂದಲೇ ನಾಲೆಗಳಿಗೆ ನೀರು ಹರಿಸಲು ನಗರದ ಕಾಡಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾ ನಿಸಲಾಯಿತು.

ಹಾರಂಗಿ ಹಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗೆ ಮುಂಗಾರು ಹಂಗಾಮಿಗೆ ನೀರು ಒದಗಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಮಳೆ ಹಾಗೂ ಜಲಾಶಯದ ಪ್ರಸ್ತುತದ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಪಡೆದು ಕಟ್ಟು ಪದ್ಧತಿಯಡಿ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ, ಮಳೆಯ ಕೊರತೆಯಿಂದ ಹಾರಂಗಿ ಜಲಾಶಯದ ಒಳ ಹರಿವಿನ ಪ್ರಮಾಣ ಕಡಿಮೆ ಇದ್ದು, ಸರಾಸರಿ 2,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಕಡಿಮೆ ಮಾಡಲಾಗಿದೆ. ರೈತರ ಹಿತದೃಷ್ಟಿಯಿಂದ ಇದೀಗ ಇದೀಗ ನಾಲೆಗಳಿಗೆ ಇಂದಿನಿಂದಲೇ ನೀರು ಹರಿಸಲಾಗುವುದು. 15 ದಿನಗಳ ಕಾಲ ನಿರಂತರವಾಗಿ ನೀರು ಹರಿಸಿದರೆ ಅಚ್ಚುಕಟ್ಟು ವ್ಯಾಪ್ತಿಯ ಅಂತಿಮ ಪ್ರದೇಶಕ್ಕೂ ನೀರು ಸಮರ್ಪಕವಾಗಿ ಹಂಚಿಕೆಯಾಗಲಿದೆ ಎಂದರು.

ಕೊಡಗಿನಲ್ಲಿ ಶೇ.33 ರಷ್ಟು ಮಳೆಯ ಕೊರತೆ ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ನೀರಿನ ಹಿತಮಿತ ಬಳಕೆಯ ಅವಶ್ಯಕತೆ ಇದೆ. ಮಳೆಯ ಕೊರತೆಯ ಸಂದರ್ಭದಲ್ಲಿ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬ ಕುರಿತು ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸ ಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹಾರಂಗಿ ಜಲಾಶಯದ ಎಡದಂಡೆ ಹಾಗೂ ಬಲದಂಡೆ ನಾಲೆಗಳಡಿಯಲ್ಲಿ ಒಟ್ಟು 1,04,895 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾ ವರಿ ಸೌಲಭ್ಯ ಒದಗಿಸಬೇಕಾಗಿದೆ. ನಾಲೆಗಳಿಗೆ 120 ದಿನಗಳ ಅವಧಿಗೆ ನೀರು ಹರಿಸಲು 20.07 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ, ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪಿನಂತೆ ಅಣೆಕಟ್ಟು ನಾಲೆಗಳಿಗೆ 12.815 ಟಿಎಂಸಿ ನೀರು ಮಾತ್ರ ಹಚಿಕೆಯಾಗಿದೆ. ನ್ಯಾಯಾಧೀಕರಣದ ತೀರ್ಪು ಹಾಗೂ ಮಳೆಯ ಕೊರತೆಯಿಂದ ಅನಿವಾರ್ಯವಾಗಿ ಕಟ್ಟುಪದ್ಧತಿಯಡಿ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ಕೆ.ಆರ್. ನಗರ ಶಾಸಕ ರವಿಶಂಕರ್, ಅರಕಲಗೂಡು ಶಾಸಕ ಎ.ಮಂಜು, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net