

ಮಡಿಕೇರಿ:
೨೦೨೩ರ ದ್ವಿತೀಯಾರ್ಧದಲ್ಲಿ ಕೊಡಗಿನಲ್ಲಿ ಮಳೆಯ ಕೊರತೆ ಕಾಡಿದರೆ, ದಶಕಗಳ ನಂತರ ಬರ ಪೀಡಿತ ಜಿಲ್ಲೆ ಎನ್ನುವ ಹಣೆಪಟ್ಟಿ ಹೊತ್ತುಕೊಳ್ಳುವಂತಾಯಿತು. ಜನಪ್ರಿಯ ಮಡಿಕೇರಿ ದಸರಾಕ್ಕೆ ಈ ವರ್ಷವೂ ಜನಸಾಗರವೇ ಹರಿದು ಬಂತು. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಈ ಬಾರಿ ತಡರಾತ್ರಿ ತೀರ್ಥೋದ್ಭವ ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ವಿಶೇಷ. ಕೊಡವ ಭಾಷೆಯಲ್ಲಿ ಈ ವರ್ಷವೂ ಚಲನಚಿತ್ರಗಳು ಸದ್ದು ಮಾಡಿದವು. ಅರೆಭಾಷೆಯಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಚಲನಚಿತ್ರ ತಯಾರಾಗುವ ಮೂಲಗ ಗಮನ ಸೆಳೆಯುವಂತಾಯಿತು.
ಜೂನ್‌ನಲ್ಲಿ ಕೈಕೊಟ್ಟಿದ್ದ ಮಳೆರಾಯ ಜುಲೈ ಆರಂಭದಲ್ಲಿ ಕೊಡಗಿನಲ್ಲಿ ಎಂದಿನಂತೆ ತನ್ನ ಅಬ್ಬರ ತೋರಿಸಲಾರಂಭಿಸಿದ್ದ. ಭಾಗಮಂಡಲ ಯಥಾ ಪ್ರಕಾರ ದ್ವೀಪವಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸುತ್ತಲಿನ ಜಗತ್ತಿನೊಂದಿಗೆ ವಾಹನ ಸಂಪರ್ಕ ಕಡಿದುಕೊಂಡಿತ್ತು. ಅಪೂರ್ಣ ಮೇಲ್ಸೇತುವೆ ಇದ್ದ ಕಾರಣ ಜನರ ಓಡಾಟಕ್ಕೆ ಸಮಸ್ಯೆ ಆಗಿರಲಿಲ್ಲ. ಪುನರ್ವಸು ಮಳೆ ಅಬ್ಬರಕ್ಕೆ ಕೊಡಗು ತತ್ತರಿಸುತ್ತಿದ್ದಂತೆಯೇ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆಯನ್ನೂ ಘೋಷಿಸಿತ್ತು. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಮಣ್ಣು ಕುಸಿದಿದ್ದರಿಂದ ರಸ್ತೆ ಸಂಪರ್ಕದಲ್ಲಿ ಸಮಸ್ಯೆ ಆಗಿತ್ತು. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಅಣೆಕಟ್ಟೆ ಭರ್ತಿ ಆಗುವ ಮೂಲಕ ರೈತರ ಮುಖದಲ್ಲಿ ನಗು ಅರಳುವಂತಾಯಿತು. ಈ ಬೆನ್ನಲ್ಲೇ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದರು.
ಆಗಸ್ಟ್ ನಂತರ ಕೊಡಗಿನಲ್ಲಿ ವಾಡಿಕೆಯ ಮಳೆ ಬರಲೇ ಇಲ್ಲ. ಹಾರಂಗಿ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನೀರು ಬಿಡುವ ಪರಿಸ್ಥಿತಿ ನಿರ್ಮಾಣ ಆಯಿತು. ತುಂತುರು ನೀರಾವರಿ ಮತ್ತು ಸಾಧಾರಣ ಮಳೆ ಬಂದ ಕಾರಣದಿಂದ ಕಾಫಿ, ಕರಿಮೆಣಸು ಬೆಳೆಗೆ ಅಷ್ಟಾಗಿ ಹಾನಿ ಆಗದಿದ್ದರೂ ಭತ್ತ ಮತ್ತು ಮೆಕ್ಕೆ ಜೋಳ ಫಸಲು ರೈತರಿಗೆ ಕೈಕೊಟ್ಟಿತು. ಬೆಳೆದ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಯಿತು. ಕೊಡವರ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ ಮತ್ತು ಸಂಘಟನೆಗಳು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಳೆಗಾಗಿ ಪಾಡಿ ಇಗ್ಗುತಪ್ಪನಲ್ಲಿ ವಿಶೇ? ಪ್ರಾರ್ಥನೆ ಸಲ್ಲಿಸಿ ಪೂಜೆಯನ್ನೂ ನೆರವೇರಿಸಿದರು. ಬೇಸಿಗೆಗೂ ಮೊದಲೇ ತಳ ಸೇರಿದ ಚಿಕ್ಲಿಹೊಳೆ ಜಲಾಶಯ ನೀರಿನಲ್ಲಿ ಮುಳುಗಿದ್ದ ಶಿವ ದೇಗುಲ ನವೆಂಬರ್‌ನಲ್ಲಿ ದರ್ಶನ ನೀಡಿತು.
ಸೆಪ್ಟೆಂಬರ್‌ನಲ್ಲಿ ಘೋಷಿಸಲಾದ ತೀವ್ರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಮಡಿಕೇರಿ, ವೀರಾಜಪೇಟೆ, ಕುಶಾಲನಗರ ಹಾಗೂ ಸಾಧಾರಣ ಬರಪೀಡಿತ ತಾಲೂಕು ಪಟ್ಟಿಯಲ್ಲಿ ಸೋಮವಾರಪೇಟೆ ತಾಲೂಕಿನ ಹೆಸರು ಸೇರ್ಪಡೆ ಆಗಿತ್ತು. ನಂತರ ಪೊನ್ನಂಪೇಟೆ ತಾಲೂಕು ಕೂಡ ಸೇರಿಕೊಂಡು ಸಂಪೂರ್ಣ ಕೊಡಗು ಬರಪೀಡಿತ ಜಿಲ್ಲೆ ಅನ್ನಿಸಿಕೊಂಡಿತು. ಬರಪರಿಹಾರ ಕಾಮಗಾರಿಗಳಿಗಾಗಿ ಸರ್ಕಾರ ನವೆಂಬರ್‌ನಲ್ಲಿ ಕೊಡಗಿಗೆ ೭.೫ ಕೋಟಿ ರೂ. ಬಿಡುಗಡೆ ಮಾಡಿತು. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಬರದಿಂದ ೫.೧೩ ಕೋಟಿ ರೂ. ನ?್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ. ೫,೯೬೬ ಹೆಕ್ಟೇರ್‌ನ?್ಟು ಬೆಳೆ ನಾಶವಾಗಿದ್ದು, ಇದರಲ್ಲಿ ೩,೭೯೬ ಹೆಕ್ಟೇರ್ ಭತ್ತ ಹಾಗೂ ೨,೧೭೦ ಹೆಕ್ಟೇರ್ ಮುಸುಕಿನ ಜೋಳ ಸೇರಿದೆ ಎಂಬ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈನಲ್ಲಿ ಮಂಡಿಸಿದ್ದ ಬಜೆಟ್ ಕೊಡಗಿನ ಪಾಲಿಗೆ ನಿರಾಸದಾಯಕ ಅಲ್ಲದಿದ್ದರೂ ಸಂಪೂರ್ಣ ಖುಷಿ ಕೊಡುವ ಬಜೆಟ್ ಅಂತೂ ಅಲ್ಲ ಎನ್ನುವ ಅಭಿಪ್ರಾಯ ಜನವಲಯದಿಂದ ವ್ಯಕ್ತವಾಯಿತು. ಕರ್ನಾಟಕದ ಕಾಫಿಗೆ ಬ್ರಾಂಡಿಂಗ್, ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ ಖರೀದಿಸಲು ಏಳು ಲಕ್ಷ ರೂ. ವರೆಗೆ ಶೇ.೪ರ ಬಡ್ಡಿ ದರದಲ್ಲಿ ಸಾಲ, ಜಿಲ್ಲೆಯಲ್ಲಿ ೪೫೦ ಬೆಡ್ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಆದ್ಯತೆ ಮೇಲೆ ಪೂರ್ಣಗೊಳಿಸುವುದು, ೧೧ ಬುಡಕಟ್ಟು ಪಂಗಡಗಳ ಪೌಷ್ಟಿಕ ಆಹಾರ ಯೋಜನೆ ೧೨ ತಿಂಗಳಿಗೆ ವಿಸ್ತರಣೆ, ಕೊಡಗಿನಲ್ಲಿ ಹೊಸ ಏರ್‌ಸ್ಟ್ರಿಪ್ ಆನೆಗಳು ನಾಡಿಗೆ ಬಾರದಂತೆ ಬ್ಯಾರಿಕೇಡ್‌ಗಳನ್ನು ನಿರ್ಮಾಣಕ್ಕೆ ಆದ್ಯತೆ, ಜಿಲ್ಲೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಬಲವರ್ಧನೆಯಂಥ ಜಿಲ್ಲೆಗೆ ಅನುಕೂಲ ಯೋಜನೆಗಳು ಬಜೆಟ್‌ನಲ್ಲಿ ಘೋಷಣೆ ಆದವು.
ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ ೧೮ರ ಬೆಳಗ್ಗೆ ೧.೨೭ಕ್ಕೆ ಪವಿತ್ರ ತೀರ್ಥೋದ್ಭವ ಸಂಭವಿಸಿತು. ಈ ವರ್ಷ ತಡರಾತ್ರಿಯಲ್ಲಿ ಈ ವಿಶೇಷ ವಿದ್ಯಮಾನ ಘಟಿಸಿದರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಾತೆ ಕಾವೇರಿಯ ದರ್ಶನ ಪಡೆದರು. ನಂತರ ಒಂದು ತಿಂಗಳ ಕಾಲ ಭಾಗಮಂಡಲ, ತಲಕಾವೇರಿಯಲ್ಲಿ ತುಲಾಸಂಕ್ರಮಣ ಜಾತ್ರೆ ನಡೆಯಿತು. ಐತಿಹಾಸಿಕ ಮಡಿಕೇರಿ ದಸರಾ ಈ ಬಾರಿ ವಿಜೃಂಭಣೆಯಿಂದ ನಡೆಯಿತು. ಲೇಸರ್ ಲೈಟ್ ಮತ್ತು ಡಿಜೆ ಬಳಕೆಗೆ ಕೋರ್ಟ್ ನಿರ್ಬಂದ ಇದ್ಧ ಕಾರಣ ಪೊಲೀಸ್ ಕಣ್ಗಾವಲಿನಲ್ಲಿ ದಸರಾ ಆಚರಿಸುವಂತಾಯಿತು. ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಸಮಿತಿಯ ಮಂಟಪ ಡಿಸಿಸಿ ಬ್ಯಾಂಕ್ ಸಮೀಪ ಮಗುಚಿದ್ದು ಕಹಿ ಘಟನೆಯಾಗಿ ಉಳಿಯಿತು. ಈ ಬಾರಿಯ ದಸರಾ ಹಲವು ಚರ್ಚೆಗಳನ್ನು ಹುಟ್ಟುಹಾಕಿದ್ದು, ಮುಂದಿನ ವರ್ಷದ ಆಚರಣೆಗೆ ಇದು ಎಚ್ಚರಿಕೆಯ ಗಂಟೆಯಾಗಿದೆ.
ಜುಲೈನಲ್ಲಿ ಕುಶಾಲನಗರದ ಅತ್ತೂರಿನಲ್ಲಿ ಉರುಳಿಗೆ ಸಿಲುಕಿ ಚಿರತೆಯೊಂದು ಮೃತಪಟ್ಟ ಘಟನೆ ನಡೆಯಿತು. ಆಗಸ್ಟ್‌ನಲ್ಲಿ ಜಿಲ್ಲೆಯ ಆನೆಹಾವಳಿ ಪೀಡಿತ ಪ್ರದೇಶಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಭೇಟಿ ನೀಡಿದ್ದರು. ಕಾಡಾನೆಗಳ ಹಾವಳಿ ಶಾಶ್ವತವಾಗಿ ತಡೆಯಲು ಉನ್ನತ ಮಟ್ಟದ ತಜ್ಞರ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಭರವಸೆ ನೀಡಿದರು. ಇದೇ ತಿಂಗಳು ಸೋಮವಾರಪೇಟೆ ತಾಲೂಕಿನ ಆಡಿನಾಡೂರು ಗ್ರಾಮದ ಈರಪ್ಪ, ಸಿದ್ದಾಪುರ ಸಮೀಪದ ಅರೆಕಾಡು ಎಂಬಲ್ಲಿ ದೇವಪ್ಪ, ಹಾಗೂ ಮಾಲ್ದಾರೆಯಲ್ಲಿ ಆಯಿಶಾ ಎಂಬವರು ಕಾಡಾನೆ ದಾಳಿಗೆ ಬಲಿಯಾದರು.
ಮತ್ತಿಗೋಡು ಆನೆ ಶಿಬಿರದಲ್ಲಿ ಪುನರ್ವಸತಿ ಪಡೆದಿದ್ದ ಆನೆ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿತು. ಅರೆಕಾಡು ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಸೆರೆಹಿಡಿಯಲಾಯಿತು. ಸೆಪ್ಟೆಂಬರ್‌ನಲ್ಲಿ ಕಾಡಾನೆ ಕಾರ್ಯಾಚರಣೆವೇಳೆ ಅರಣ್ಯ ಸಿಬ್ಬಂದಿ ದುರ್ಮರಣ. ನಂತರ ಈ ಆನೆಯನ್ನು ಮಡಿಕೇರಿ ತಾಲೂಕು ಕೆದಕಲ್ ಬಳಿ ಸೆರೆ ಹಿಡಿಯಲಾಯಿತು. ವಿರಾಜಪೇಟೆ ತಾಲೂಕಿನಲ್ಲಿ ಹುಲಿ ದಾಳಿಯಿಂದ ಹಸುವೊಂದು ಮೃತಪಟ್ಟಿತು. ಅಕ್ಟೋಬರ್‌ನಲ್ಲಿ ಪೊನ್ನಂಪೇಟೆ ತಾಲೂಕು ಕುಂದ ಗ್ರಾಮದಲ್ಲಿ ಸುಮಾರು ೬ ಅಡಿ ಉದ್ದದ ಬೃಹತ್ ಗಾತ್ರದ ಉಡಾ ಪತ್ತೆಯಾಗಿ ಸುದ್ದಿಯಾಯಿತು.
ಜುಲೈನಲ್ಲಿ ಹುಣಸೂರು ಬಳಿ ಸಂಭವಿಸಿದ ಅಪಘಾತದಲ್ಲಿ ಸೋಮವಾರಪೇಟೆ ತಾಲೂಕು ಹಿರಿಕರ ಗ್ರಾಮದ ನಿವೃತ್ತ ಪ್ರಾಚಾರ್ಯ ಎಚ್.ಬಿ. ಬೆಳ್ಳಿಯಪ್ಪ ಮತ್ತು ಪತ್ನಿ ವೀಣಾ ಮೃತರಾದರು. ಆಗಸ್ಟ್‌ನಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಜನರಲ್ ತಿಮ್ಮಯ್ಯ ಪ್ರತಿಮೆಗೆ ಹಾನಿ ಆಯಿತು. ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಮಂಡ್ಯ ಮೂಲದ ರಶ್ಮಿ(೨೭) ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಹಾರಂಗಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಬೆಂಗಳೂರಿನ ಪ್ರವಾಸಿ ಸಂದೀಪ್ ನದಿಗೆ ಬಿದ್ದು ಸಾವಪ್ಪಿದರು. ಸೆಪ್ಟೆಂಬರ್‌ನಲ್ಲಿ ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಉದಿಯನ ಕಾಳಪ್ಪ-ದಮಯಂತಿ ಪುತ್ರ, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯು.ಕೆ. ಜಿತನ್ ಅನಾರೋಗ್ಯದಿಂದ ನಿಧನರಾದರು. ಅಕ್ಟೋಬರ್‌ನಲ್ಲಿ ಮಡಿಕೇರಿಯಲ್ಲಿ ಕಟ್ಟಡ ಕಾಮಗಾರಿ ಸಂದರ್ಭ ಬರೆ ಕುಸಿದು ಹುಬ್ಬಳ್ಳಿ ಮೂಲದ ಬಸವ, ಲಿಂಗಪ್ಪ ಹಾಗೂ ಹಾವೇರಿ ಮೂಲದ ಆನಂದ್ ಮೃತರಾದರು. ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಜೀವನ ದಾರಿ ಆಶ್ರಮ ಸಂಸ್ಥಾಪಕ ರಮೇಶ್ ಮತ್ತು ಪತ್ನಿ ರೂಪಾ ದುರ್ಮರಣಕ್ಕೀಡಾದರು.
ನವೆಂಬರ್‌ನಲ್ಲಿ ಹನಿ ಟ್ರ್ಯಾಪಿಂಗ್‌ಗೆ ಸಿಲುಕಿದ್ದ ನಿವೃತ್ತ ಯೋಧ ಮಡಿಕೇರಿ ಉಕ್ಕುಡ ನಿವಾಸಿ ಸಂದೇಶ್ ಆತ್ಮಹತ್ಯೆ ಮಾಡಿಕೊಂಡರು. ವಿದ್ಯುತ್ ಲೈನ್ ದುರಸ್ತಿಸಂದರ್ಭ ವಿರಾಜಪೇಟೆ ಆರ್ಜಿ ಗ್ರಾಮದಲ್ಲಿ ಲೈನ್‌ಮ್ಯಾನ್ ಅನಿಲ್ ಮ್ಯಾನೇಜಸ್ ಮೃತರಾದರು. ಡಿಸೆಂಬರ್‌ನಲ್ಲಿ ಮಡಿಕೇರಿ ಸಮೀಪದ ಹೋಂಸ್ಟೇನಲ್ಲಿ ಕೇರಳ ಮೂಲದ ದಂಪತಿ ಮಗು ಸಮೇತ ಆತ್ಮಹತ್ಯೆ ಮಾಡಿಕೊಂಡರು. ತಡಿಯಂಡಮೋಳ್ ಬೆಟ್ಟದಲ್ಲಿ ಟ್ರಕ್ಕಿಂಗ್ ವೇಳೆ ಹರಿಯಾಣ ಮೂಲದ ಜತಿನ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟರು. ಶಬರಿಮಲೆಯಿಂದ ವಾಪಸ್ ಬರುವಾಗ ಸಂಭವಿಸಿದ ಅಪಘಾತದಲ್ಲಿ ಕುಶಾಲನಗರದ ಚಂದ್ರ ಸಾವನ್ನಪಿದರು.
ಪಂಚಾಯತ್ ರಾಜ್‌ನಿಂದ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಆಗಸ್ಟ್‌ನಲ್ಲಿ ನಡೆದ ರಾ?್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಭಾಗವಹಿಸಿತ್ತು. ಬೋಯಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಪೂರ್ಣೇಶ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದರು. ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಮತ್ತು ಈರಮಂಡ ಹರಿಣಿ ವಿಜಯ್‌ಗೆ ಈ ಸಾಲಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ಟಾಪ್ ೧೦ ಸ್ಥಳಗಳಲ್ಲಿ ಮಡಿಕೇರಿ ೫ನೇ ಸ್ಥಾನ ಪಡೆಯಿತು. ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ಜಗತ್ತಿನ ಅತ್ಯುತ್ತಮ ಪ್ರವಾಸಿತಾಣಗಳ ಪೈಕಿ ಕೊಡಗು ೭ನೇ ಸ್ಥಾನ ಪಡೆಯಿತು. ನ್ಯಾಶನಲ್ ಅಸೋಸಿಯೇಶನ್ ಅಫ್ ರೈಫಲ್ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ೬೬ನೇ ರಾ?್ಟ್ರಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿ ಕೊಡಗು ವಿದ್ಯಾಲಯದ ಕಾನಡ್ಕ ಧನ್ವಿ ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿ?ತ್‌ನ ರಾಜ್ಯಮಟ್ಟದ ಡಾ. ಎಚ್. ನರಸಿಂಹಯ್ಯ ಪ್ರಶಸ್ತಿಗೆ ಕುಶಾಲನಗರ ವಿವೇಕಾನಂದ ಎಜುಕೇ?ನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ಭಾಜನರಾದರು.
ಸ್ಯಾಂಡಲ್‌ವುಡ್ ನಟರಾದ ಉಳ್ಳಿಯಡ ಭುವನ್ ಪೊನ್ನಣ್ಣ ಮತ್ತು ಉದ್ದಪ್ಪಂಡ ಹರ್ಷಿಕಾ ಪೂಣಚ್ಚ ಅಮ್ಮತ್ತಿ ಕೊಡವ ಸಮಾಜದಲ್ಲಿ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಿ.ಎಸ್. ಯಡಿಯೂರಪ್ಪ, ಗಣೇಶ್ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಶುಭ ಹಾರೈಸಿದರು. ಕೊಡವ ಸಿನಿಮಾರಂಗ ಕ್ರಿಯಾಶೀಲವಾಗಿದ್ದು, ಕೊಡವಭಾಷೆಯಲ್ಲಿ ಈ ವರ್ಷ ಹಲವು ಚಿತ್ರಗಳು ತಯಾರಾದವು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿ ಮೆಚ್ಚುಗೆಗೂ ಪಾತ್ರವಾದವು. ಅರೆಭಾಷೆಯಲ್ಲೂ ಇದೇ ಮೊದಲ ಬಾರಿಗೆಮ ಪೂರ್ಣ ಪ್ರಮಾಣದ ಚಿತ್ರವೊಂದು ತಯಾರಾಗಿದೆ.