

ಕುಶಾಲನಗರ: ಮಳೆಗಾಲ ಮುಗಿಯುತ್ತಿದ್ದಂತೆಯೇ ಹಾರಂಗಿ ಅಣೆಕಟ್ಟೆ ಪುನ್ಚೇತನ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.
ಭಾನುವಾರ ಹಾರಂಗಿ ಅಣೆಕಟ್ಟೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ೨೦೧೮ ರಲ್ಲಿ ಸುರಿದ ಭಾರಿ ಮಳೆಯಿಂದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಗುಡ್ಡ ಕುಸಿದು, ಜಲಾಶಯದಲ್ಲಿ ಹೂಳು ಮಿಶ್ರಿತ ಮಣ್ಣು ಶೇಖರಣೆ ಆಗಿದೆ. ಈ ಹೂಳು ತೆಗೆಯಲು, ಭವಿಷ್ಯದಲ್ಲಿ ನದಿ ಪಾರ್ಶ್ವಗಳ ಗುಡ್ಡ ಕುಸಿಯದಂತೆ ತಡೆಯಲು ಅಣೆಕಟ್ಟೆ ಪುನಶ್ಚೇತನ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರ ೧೩೦ ಕೋಟಿ ರೂ. ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಹಾರಾಷ್ಟ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆದಾರರಿಗೆ ಎಲ್‌ಒಎ ನೀಡಲಾಗಿದೆ ಎಂದರು.
ಕಾವೇರಿ ಕೊಳ್ಳ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಆರೋಪ ಸರಿಯಲ್ಲ. ಜೀವನದಿಯ ಎಲ್ಲಾ ೨೮೪ ಟಿಎಂಸಿ ನೀರಿನ ಸದುಪಯೋಗ ಆಗುತ್ತಿದೆ. ಮಲೆಗಾಲದಲ್ಲಿ ಕಾವೇರಿ ನದಿಯಲ್ಲಿ ೬೦ ಸಾವಿರ ಕ್ಯುಸೆಕ್‌ಗಿಂತಲೂ ಅಧಿಕ ನೀರು ಬಂದಾಗ ನದಿ ದಂಡೆಯ ಬಡಾವಣೆಗಳು ಜಲಾವೃತ ವಾಗುತ್ತದೆ. ಇದನ್ನು ತಡೆಯಲು ವಿವರವಾದ ವರದಿ ತಯಾರಿಸುವ ಸಲುವಾಗಿ ಸರ್ವೆ ಕಾರ್ಯ ನಡೆಸಿ ಅಂದಾಜು ತಯಾರಿಸಲಾಗಿದೆ ಎಂದು ಹೇಳಿದರು.
ಕಾವೇರಿ ಮತ್ತು ಹಾರಂಗಿ ನದಿ ದಂಡೆಯಲ್ಲಿ ೨೦ ಕಿಮೀ ಸರ್ವೆ ಕಾರ್ಯ ನಡೆಸಿದ್ದು, ಶಾಶ್ವತವಾಗಿ ಪ್ರವಾಹ ನಿಯಂತ್ರಿಸಲು ೫೮೦ ಕೋಟಿ ರೂ. ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ ಕುಶಾಲನಗರ ವ್ಯಾಪ್ತಿಯ ಕೊಪ್ಪ ಸೇತುವೆಯ ಮೇಲ್ಭಾಗದಲ್ಲಿ ೫ ಕಿಮೀ ಮತ್ತು ಕೆಳಭಾಗದಲ್ಲಿ ೪ ಕಿಮೀನಲ್ಲಿ ರಕ್ಷಣಾ ಕಾಮಗಾರಿ ಕೈಗೊಳ್ಳಲು ೩೦೦ ಕೋಟಿ ರೂ. ಅನುದಾನದ ಅಗತ್ಯವಿದೆ ಎಂದರು.
ಜಲ ನಿರ್ವಹಣೆಯಲ್ಲಿ ಇಲಾಖೆಯ ಅಧಿಕಾರಿಗಳು ಎಚ್ಚರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಮಳೆ ೧೦ ಪಟ್ಟು ಹೆಚ್ಚಾಗುತ್ತಿದೆ. ಒಮ್ಮೆಲೆ ನೀರು ಹರಿದು ಬಂದಾಗ ಅಣೆಕಟ್ಟೆಯಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ನೀರನ್ನು ನದಿಗೆ ಹರಿಸುವುದು ಅನಿವಾರ್ಯ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಳಪಾತ್ರದಲ್ಲಿ ನಷ್ಟ ಉಂಟಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಕೊಡಲಾಗು ವುದೆಂದರು.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ಮುಖ್ಯ ಅಭಿಯಂತರ ವೆಂಕಟೇಶ್, ಅಧೀಕ್ಷಕ ಅಭಿಯಂತರ ಚನ್ನಕೇಶವ ಇದ್ದರು.