

ಮಡಿಕೇರಿ:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ನಿರ್ವಹಣೆ ವಿಶೇಷವಾಗಿ ಗಮನ ಸೆಳೆಯುತ್ತಿದೆ. ರಾಜ್ಯದ ಬಹುತೇಕ ಜಲಾಶಯಗಳು ಖಾಲಿ ಆಗಿದ್ದರೂ ಹಾರಂಗಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಸುಮಾರು 8 ಅಡಿಗಳಷ್ಟು ಹೆಚ್ಚು ನೀರಿದೆ. ಹಿಂದಿನ ವರ್ಷವೂ ಮಲೆನಾಡು ಜಿಲ್ಲೆ ಕೊಡಗಿನಲ್ಲೂ ಬರದ ಪರಿಣಾಮ ಗಾಢವಾಗಿ ತಟ್ಟಿದ್ದರೂ ಹಾರಂಗಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಇತ್ತು.
2022ರ ಮುಂಗಾರಿಗೆ ಹೋಲಿಸಿದರೆ 2023ರ ಮುಂಗಾರು ಕೊಡಗಿನಲ್ಲಿ ನಿರೀಕ್ಷೆಯಂತೆ ಅಬ್ಬರಿಸಲಿಲ್ಲ. ಮಳೆಯ ಪ್ರಮಾಣ ಸಾಧಾರಣಕ್ಕಿಂತ ತುಂಬಾ ಕಡಿಮೆ ಇತ್ತು. ಆದರೆ 2024ರ ಮಳೆಗಾಲ ಜಿಲ್ಲೆಯ ಪಾಲಿಗೆ ಆಶಾದಾಯಕವಾಗಿಯೇ ಇತ್ತು. ಡಿಸೆಂಬರ್ ತನಕವೂ ಉತ್ತಮ ಮಳೆಯಾಗಿದೆ. ಹಾಗಾಗಿ ಕೊಡಗಿನ ಏಕೈಕ ದೊಡ್ಡ ಅಣೆಕಟ್ಟೆ ಹಾರಂಗಿಯಲ್ಲಿ ಕಳೆದ ಸಾಲಿಗಿಂತ ಅಧಿಕ ನೀರಿನ ಸಂಗ್ರಹ ಆಗಿತ್ತು. ಜೀವನದಿ ಕಾವೇರಿ ಹರಿವು ಬೇಸಿಗೆಯಲ್ಲಿ ಕ್ಷೀಣವಾಗಿದ್ದರೂ ಕಾವೇರಿಯ ಉಪನದಿ ಹಾರಂಗಿ ಅಣೆಕಟ್ಟೆಯಲ್ಲಿ ಈಗಲೂ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿದೆ.
2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಮಂಗಳವಾರದ (ಮೇ20) ಮಾಹಿತಿ ಪ್ರಕಾರ 2831.65 ಅಡಿಗಳಷ್ಟು ನೀರಿದೆ. ಹಿಂದಿನ ವರ್ಷ ಮುಂಗಾರು ಅಷ್ಟೇನೂ ಉತ್ತಮ ಆಗಿರದಿದ್ದರೂ ಕಳೆದ ವರ್ಷದ ಇದೇ ದಿನ 2823.09 ಅಡಿಗಳಷ್ಟು ಮಾತ್ರ ನೀರು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 8.51 ಅಡಿಗಳಷ್ಟು ಹೆಚ್ಚಿನ ನೀರಿನ ಸಂಗ್ರಹ ಜಲಾಶಯದಲ್ಲಿ ಇದೆ.
8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 3.3228 ಟಿಎಂಸಿ ನೀರಿನ ಸಂಗ್ರಹವಿದ್ದು, ಡೆಡ್ ಸ್ಟೋರೇಜ್ ಹೊರತುಪಡಿಸಿದರೆ 2.672 ಟಿಎಂಸಿ ಬಳಕೆಗೆ ಯೋಗ್ಯ ನೀರಿನ ಸಂಗ್ರಹ ಇಲ್ಲಿದೆ. ಕಳೆದ ವರ್ಷ ಇದೇ ದಿನ ಇದ್ದ 2.949 ಟಿಎಂಸಿ ನೀರಿನ ಸಂಗ್ರಹದಲ್ಲಿ ಡೆಡ್ ಸ್ಟೋರೇಜ್ ಕಳೆದು 2.199 ಟಿಎಂಸಿಗಳಷ್ಟು ನೀರಿನ ಸಂಗ್ರಹ ಇತ್ತು.
ಈಗ ನೀರಿನ ಒಳಹರಿವು 136 ಕ್ಯೂಸೆಕ್ಸ್ಗಳಿದ್ದು, 100 ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಕಳೆದ ವರ್ಷ ಇದೇ ದಿನ 287 ಕ್ಯೂಸೆಕ್ಸ್ ನೀರಿನ ಒಳಹರಿವು ಇತ್ತು. ನದಿಗೆ 200 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿತ್ತು.್ತ ಕಾಲುವೆಗೆ ನೀರು ಹರಿಸುತ್ತಿರಲಿಲ್ಲ. ಈ ವರ್ಷ ಮಳೆ ಇಲ್ಲ. ಆದರೆ ಕಳೆದ ವರ್ಷ ಇದೇ ದಿನ 31.4 ಮಿಮೀ ಮಳೆ ಆಗಿತ್ತು.
ಈ ವರ್ಷ ಇಲ್ಲಿಯ ತನಕ ಅಣೆಕಟ್ಟೆಗೆ 39.593 ಟಿಎಂಸಿ ನೀರು ಹರಿದು ಬಂದಿದ್ದು, ಕಾವೇರಿ ನದಿ ಮೂಲಕ ಕೆಆರ್‌ಎಸ್ ಅಣೆಕಟ್ಟೆ ಕಡೆಗೆ 28.808 ಟಿಎಂಸಿ ನೀರು ಬಿಡಲಾಗಿದೆ. ಕಾಲುವೆಗೆ 9.520 ಟಿಎಂಸಿ ನೀರು ಹರಿಸಲಾಗಿದೆ. ಇಷ್ಟಾದರೂ ಮೇ ತಿಂಗಳ ಮಧ್ಯ ಭಾಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 8 ಅಡಿ ಹೆಚ್ಚು ನೀರಿದ್ದರೆ. ಸುಮಾರು 0.38 ಟಿಎಂಸಿ ನೀರಿನ ಹೆಚ್ಚುವರಿ ಸಂಗ್ರಹ ಇದೆ.
4 ವರ್ಷಕ್ಕೆ ಒಮ್ಮೆ ಬರ ಸಾಮಾನ್ಯ ಎನ್ನುವ ನಂಬಿಕೆಯಿAದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ 2023ರಲ್ಲಿ ನೀರಿನ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. 2024ರ ಮುಂಗಾರಿನಲ್ಲೂ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದರಿAದ ಈ ವರ್ಷವೂ ನೀರು ಉಳಿಸಿಕೊಳ್ಳಲು ಸಾಧ್ಯವಾಗಿದೆ. ರಾಜ್ಯದ ಉಳಿದೆಲ್ಲಾ ಜಲಾಶಯಗಳು ಬಹುತೇಕ ಬರಿದಾಗಿದ್ದರೂ ಮಳೆಗಾಲದಲ್ಲಿ ಕೆಳಪಾತ್ರದಲ್ಲಿ ಪ್ರವಾಹ ತಪ್ಪಿಸಲು ಹೆಚ್ಚುವರಿ ನೀರನ್ನು ಹರಿಸಿದ ನಂತರವೂ ಕರಾರುವಕ್ಕಾದ ಲೆಕ್ಕಾಚಾರದ ಮೂಲಕ ಈ ಪ್ರಮಾಣದಲ್ಲಿ ಇಲ್ಲಿ ನೀರು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೊದಲೆಲ್ಲಾ ಜೂನ್, ಜುಲೈ, ಆಗಸ್ಟ್ನಲ್ಲಿ ಮಳೆ ಜೋರಾಗಿ ಬರುತ್ತಿತ್ತು. ಈಗ ಮಳೆಯ ಚಕ್ರ ಸ್ವಲ್ಪ ಮುಂದಕ್ಕೆ ಹೋಗಿ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆ ಆಗುವಂತಾಗಿದೆ. ಹಾಗಾಗಿ ಬೆಳೆಗಳಿಗೆ ನೀರಿನ ಬಳಕೆ ಪ್ರಮಾಣದಲ್ಲೂ ವ್ಯತ್ಯಾಸವಾಗಿದ್ದು, ಅಣೆಕಟ್ಟೆಯಿಂದ ಕಾಲುವೆಗಳಿಗೆ ಹರಿಸಿದ ನೀರಿನ ಪ್ರಮಾಣವೂ ಕಡಿಮೆ ಆಗಿದೆ. ಈ ಕಾರಣದಿಂದಲೂ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಇರಬಹುದು ಎನ್ನುವ ಚರ್ಚೆಯೂ ನಡೆದಿದೆ.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಾರಂಗಿ ಜಲಾಶಯದಿಂದ ನೀರಾವರಿಯ ಅನುಕೂಲತೆ ಇದೆ. ಇಷ್ಟು ಪ್ರದೇಶದಲ್ಲಿ ಒಂದು ಬೆಳೆ ಬೆಳೆÀಯಲು ವರ್ಷಕ್ಕೆ 18 ಟಿಎಂಸಿ ನೀರು ಬೇಕಾಗುತ್ತದೆ. 8.5 ಟಿಎಂಸಿ ಸಾಮರ್ಥ್ಯದ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ಭರ್ತಿ ಆದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರು ಸಮೃದ್ಧ ಬೆಳೆ ತೆಗೆಯಬಹುದು. ಈ ವರ್ಷ ಕಾಳುವೆಗಳ ಮೂಲಕ ರೈತರಿಗೆ ಸಮೃದ್ಧವಾಗಿ ನೀರು ಕೊಡಲಾಗಿತ್ತು. ಆದರೆ ಬೇಸಿಗೆ ಬೆಳೆಗೆ ನೀರು ಕೊಡುವುದನ್ನು ನಿಲ್ಲಿಸಿ 3 ದಶಕಗಳೇ ಕಳೆದಿವೆ. ಈ ಬಾರಿ ಮೇ ತಿಂಗಳಿನಲ್ಲೇ 2831.65 ಅಡಿಗಳಷ್ಟು ನೀರಿದ್ದು, ಈಗಾಗಲೇ ಮಳೆ ಆರಂಭದ ಲಕ್ಷಣಗಳು ಕಾಣಿಸಿಕೊಂಡಿರುವುದರಿAದ 2859 ಅಡಿ ಎತ್ತರದ ಅಣೆಕಟ್ಟೆ ಶೀಘ್ರವಾಗಿಯೇ ಭರ್ತಿ ಆಗುವ ನಿರೀಕ್ಷೆಯೂ ಇದೆ
ಕಾವೇರಿ ನದಿಪಾತ್ರದಲ್ಲಿ ಬರುವ ಜನವಸತಿ ಪ್ರದೇಶಗಳು ಕುಡಿಯುವ ನೀರಿಗಾಗಿ ನದಿ ಮೂಲವನ್ನೇ ಅವಲಂಭಿಸಿವೆ. ಹಾರಂಗಿ ನದಿ ಕೂಡಿಗೆಯಲ್ಲಿ ಕಾವೇರಿ ನದಿ ಸೇರಿದ ನಂತರ ಕೆಆರ್‌ಎಸ್ ತನಕ ಕುಡಿಯುವ ನೀರಿನ ಯೋಜನೆಯ ಸುಮಾರು 30 ಘಟಕಗಳು ಇವೆ. ಹಾರಂಗಿ ಅಣೆಕಟ್ಟೆಯ ನೀರನ್ನು ಆಪತ್ಕಾಲದ ಬಳಕೆಗೆ ಕಾಪಿಡಲಾಗುತ್ತದೆ. ಸಂಕಷ್ಟದ ಸಮಯದಲ್ಲಿ ಕಾವೇರಿ ನದಿಯ ನೀರಿನ ಮೂಲ ಹಾರಂಗಿ ಅಣೆಕಟ್ಟೆಯೇ ಆಗಿದೆ. ಇದೀಗ ಕುಶಾಲನಗರ ಮತ್ತು ಪಿರಿಯಾಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯ ಅಮೃತ್-02 ಯೋಜನೆ ಕಾಮಗಾರಿಯೂ ಹಾರಂಗಿ ಮತ್ತು ಕಾವೇರಿ ನದಿ ಸಂಗಮ ಸ್ಥಳದಲ್ಲಿ ನಡೆಯುತ್ತಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ತುಂಬಾ ಚೆನ್ನಾಗಿ ಲೆಕ್ಕಾಚಾರ ಮಾಡಿರುವುದರಿಂದ ಜಲಾಶಯದಲ್ಲಿ ಕಳೆದ ಬಾರಿಗಿಂತ ಹೆಚ್ಚು ನೀರು ಸಂಗ್ರಹ ಸಾಧ್ಯವಾಗಿದೆ. ವೈಜ್ಞಾನಿಕ ರೀತಿಯಲ್ಲಿ ನೀರು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಇದೇ ರೀತಿಯ ವ್ಯವಸ್ಥೆಯನ್ನೂ ರೂಢಿಸಿಕೊಂಡು ಬರಲಾಗುತ್ತಿದೆ. ಅತ್ಯಾಧುನಿಕ ವಿಧಾನಗಳ ಮೂಲಕ ನೀರು ನಿರ್ವಹಣೆ ಮಾಡುತ್ತಿರುವುದರಿಂದ ಕರಾರುವಕ್ಕಾದ ಲೆಕ್ಕಾಚಾರವೂ ಸಾಧ್ಯವಾಗುತ್ತದೆ.
ಐ.ಕೆ. ಪುಟ್ಟಸ್ವಾಮಿ, ಇಇ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ
ಜಲಾಶಯದಲ್ಲಿ ನೀರಿನ ಮಟ್ಟ ಕಾಪಾಡಿಕೊಳ್ಳುವಲ್ಲಿ ಅಧಿಕಾರಿಗಳ ಶ್ರಮ ಶ್ಲಾಘನೀಯ. ಅಣೆಕಟ್ಟೆ ಕೆಳಪಾತ್ರದಲ್ಲಿ ಪ್ರವಾಹ ತಪ್ಪಿಸಲು ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ನಂತರವೂ ಈ ಸಾಧನೆ ಸಾಧ್ಯವಾಗಿರುವುದು ಗಮನಾರ್ಹ. ಮುಂದಿನ ವರ್ಷದಿಂದ ಬೇಸಿಗೆ ಬೆಳೆಗೂ ನೀರು ಕೊಡುವಂತಾದರೆ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಕೆ. ಕೃಷ್ಣೇಗೌಡ, ರೈತ ಮುಖಂಡ, ತೊರೆನೂರು