ಹಾರಂಗಿ ಅಣೆಕಟ್ಟೆಗೆ ಪ್ರವಾಸಿಗರ ನಿರ್ಬಂಧ

harangi
Published on

ಮಡಿಕೇರಿ:

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ದೇಶದ ಹಿತದೃಷ್ಟಿಯಿಂದ ನೀರಾವರಿ ಇಲಾಖೆಯ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸ್ವಾಗತ ವ್ಯಕ್ತವಾಗಿದೆ. ಆದರೆ ಜಲಾಶಯದ ಒತ್ತಿನಲ್ಲೇ ಇರುವ ಸಾಕಾನೆ ಶಿಬಿರ ಪ್ರವಾಸಿಗರಿಗಾಗಿ ತೆರೆದಿರುವುದು ಅಣೆಕಟ್ಟೆಯ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ.

ಭದ್ರತಾ ದೃಷ್ಟಿಯಿಂದ ಕುಶಾಲನಗರ ತಾಲೂಕಿನ ಹಾರಂಗಿ ಅಣೆಕಟ್ಟೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರವೇಶದ್ವಾರದ ಗೇಟ್ ಬಂದ್ ಮಾಡಲಾಗಿದ್ದು, ‘ತಾಂತ್ರಿಕ ದೋಷಗಳ ಕಾರಣದಿಂದ ಅನಿರ್ದಿಷ್ಟ ಕಾಲದ ವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ,’ ಎನ್ನುವ ಚೀಟಿಯನ್ನು ಗೇಟ್‌ಗೆ ಅಂಟಿಸಲಾಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ವಿಷಯದ ಅರಿವಿಲ್ಲದೆ ಆಗಮಿಸುತ್ತಿರುವ ಪ್ರವಾಸಿಗರನ್ನು ವಾಪಸ್ ಕಳಿಸಲಾಗುತ್ತಿದೆ.

ಮುಖ್ಯ ಗೇಟ್ ಬಳಿ ಮಾತ್ರ ‘ಬಿಗಿ ಭದ್ರತೆ ವಾತಾವರಣ’ ಕಂಡು ಬರುತ್ತದೆ. ಅಣೆಕಟ್ಟೆ ಎದುರುಗಡೆಯ ಸೇತುವೆ ಬಳಿ, ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ತೆರಳುವ ಮಾರ್ಗದಲ್ಲಿ ಇಂಥ ಯಾವುದೇ ಹೆಚ್ಚುವರಿ ಭದ್ರತೆ ಕಂಡುಬರುತ್ತಿಲ್ಲ. ಯಾರು ಬೇಕಾದರೂ ಸುಲಭವಾಗಿ ಇಲ್ಲಿ ಸುತ್ತಾಡಬಹುದಾದ ಸ್ಥಿತಿ ಇದೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಎಂದು ಮುಖ್ಯ ಗೇಟ್ ಬಳಿ ಮಾತ್ರ ಚೀಟಿ ಅಂಟಿಸಲಾಗಿದ್ದು, ಉಳಿದೆಡೆ ಈ ನಿರ್ಬಂಧ ಇಲ್ಲವೇ ? ಬೇರೆ ಕಡೆಯಿಂದ ಅಪಾಯ ಎದುರಾಗುವುದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇನ್ನೂ ಹೆಚ್ಚಿನ ಆತಂಕಕಾರಿ ವಿಷಯ ಎಂದರೆ ಜಲಾಶಯ ಪಕ್ಕದಲ್ಲಿ ಇರುವ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇಲ್ಲ. ಬೆಳಗ್ಗೆ 9 ಗಂಟೆಯಿAದ 11 ಗಂಟೆ ಮತ್ತು ಸಂಜೆ 4 ಗಂಟೆಯಿAದ 6 ಗಂಟೆ ತನಕ ಪ್ರವಾಸಿಗರು ನಿರಾತಂಕವಾಗಿ ಸಾಕಾನೆ ಶಿಬಿರದ ಒಳಕ್ಕೆ ಹೋಗಬಹುದು. ಹಾರಂಗಿ ಜಲಾಶಯದ ಮುಖ್ಯದ್ವಾರದಲ್ಲಿ ಬಿಗಿ ಭದ್ರತೆಯ ವಾತಾವರಣ ಇದ್ದರೆ, ಸಾಕಾನೆ ಶಿಬಿರ ಭಾಗದಿಂದ ಜಲಾಶಯಕ್ಕೆ ಸುಲಭವಾಗಿ ದಾಟಬಹುದಾದ ಬೇಕಾದಷ್ಟು ದಾರಿಗಳು ಇವೆ.

ಸಾಕಾನೆ ಶಿಬಿರದಲ್ಲಿ ಆನೆಗಳ ದೈನಂದಿನ ಚಟುವಟಿಕೆಗಳ ವೀಕ್ಷಣೆಗೆ ಅವಕಾಶ ಇದೆ. ಇಷ್ಟು ಮಾತ್ರ ಆಗಿದ್ದರೆ ಭದ್ರತೆಯ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಈ ಆನೆ ಶಿಬಿರದ ಮೂಲಕ ತೆರಳಿ ಹಾರಂಗಿ ಹಿನ್ನೀರಿನಲ್ಲಿ ಜಲಕ್ರೀಡೆಯೂ ಆಡಬಹುದು. ಅಣೆಕಟ್ಟೆಯ ಕೂಗಳತೆ ದೂರದಲ್ಲೇ ಹಿನ್ನೀರಿನಲ್ಲಿ ವಿವಿಧ ರೀತಿಯ ಬೋಟಿಂಗ್‌ಗಳಲ್ಲಿ ಭಾಗವಹಿಸುವ ಅವಕಾಶ ಈಗಲು ಕೂಡ ಪ್ರವಾಸಿಗರಿಗೆ ಮಾಡಿಕೊಡಲಾಗಿದೆ. ನೀರಾವರಿ ಇಲಾಖೆ ಹಾರಂಗಿ ಅಣೆಕಟ್ಟೆಯ ಮುಖ್ಯ ಗೇಟ್ ಬಂದ್ ಮಾಡಿ ‘ಭದ್ರತೆಯ ವಾತಾವರಣ’ ಸೃಷ್ಟಿ ಮಾಡಿದ್ದರೆ, ಅರಣ್ಯ ಇಲಾಖೆಯ ಆನೆ ಶಿಬಿರದ ಮೂಲಕ ನೇರವಾಗಿ ಹಾರಂಗಿ ಹಿನ್ನೀರಿಗೆ ಪ್ರವೇಶಿಸುವ ಅವಕಾಶ ಮಾಡಿಕೊಡಲಾಗಿದೆ.

ಹಾರಂಗಿ ಸಾಕಾನೆ ಶಿಬಿರದ ಪ್ರವೇಶ ದ್ವಾರದಲ್ಲಿ ಇರುವ ಸಿಬ್ಬಂದಿ ಕೂಡ ಹಾರಂಗಿ ಹಿನ್ನೀರಿಗೆ ತೆರಳಬಹುದಾದ ದಾರಿಯ ಬಗ್ಗೆ ಪರೋಕ್ಷವಾಗಿ ಸುಳಿವು ಕೊಡುತ್ತಾರೆ. ‘ಸಾಕಾನೆ ಶಿಬಿರದಲ್ಲಿ ಏನೇನು ಇದೆ ?’ ಎಂದು ಕೇಳಿದರೆ, ‘ಇಲ್ಲಿ ಸಾಕಾನೆಗಳನ್ನು ನೋಡಬಹುದು, ಪಾರ್ಕ್ ಇದೆ, ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್ ಕೂಡ ಮಾಡಬಹುದು. ಯಾವುದೇ ಅಪಾಯ ಆಗದಂತೆ ಬೋಟಿಂಗ್ ನಿರ್ವಾಹಕರು ನೋಡಿಕೊಳ್ಳುತ್ತಾರೆ,’ ಎನ್ನುವ ಮಾತು ಸೇರಿಸುತ್ತಾರೆ.

ಒಂದು ಕಡೆ ಸುರಕ್ಷತೆ ದೃಷ್ಟಿಯಿಂದ ಹಾರಂಗಿ ಜಲಾಶಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದರೆ, ಮತ್ತೊಂದು ಕಡೆ ಪಕ್ಕದಲ್ಲೇ ಇರುವ ಸಾಕಾನೆ ಶಿಬಿರಕ್ಕೆ ಪ್ರವೇಶಾವಕಾಶ ಕೊಡುವ ಮೂಲಕ ಹಾರಂಗಿ ಅಣೆಕಟ್ಟೆಗೆ ಪರೋಕ್ಷವಾಗಿ ಪ್ರವೇಶಿಸುವ ಅವಕಾಶವನ್ನು ಅರಣ್ಯ ಇಲಾಖೆಯೇ ಮಾಡಿಕೊಟ್ಟಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇದೀಗ ದೇಶದ ಭದ್ರತೆ ವಿಷಯವೇ ಮುಖ್ಯವಾಗಿರುವುದರಿಂದ ತಕ್ಷಣದಿಂದಲೇ ಹಾರಂಗಿ ಸಾಕಾನೆ ಶಿಬಿರವನ್ನು ಪ್ರವಾಸಿಗರಿಗೆ ಮುಚ್ಚಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಹಾರಂಗಿ ಹಿನ್ನೀರು ಪ್ರದೇಶ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಇಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಬಹಳ ಹಿಂದೆಯೇ ಕಾವೇರಿ ನಿಗಮ ನಾಮಫಲಕಗಳನ್ನು ಅಳವಡಿಸಿದೆ. ಆದರೆ ಈ ನಿರ್ಬಂಧ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಒಂದು ಬದಿಯಲ್ಲಿ ಯಡವನಾಡು, ಮತ್ತೊಂದು ಬದಿಯಲ್ಲಿ ತೊಂಡೂರು ಹೀಗೆ ಯಾವ ಬದಿಯಿಂದಾದರೂ ಸುಲಭವಾಗಿ ಹಾರಂಗಿ ಹಿನ್ನೀರು ಪ್ರವೇಶಿಸುವ ಅವಕಾಶ ಇದೆ. ಇಲ್ಲಿ ಯಾವುದೇ ಕಣ್ಗಾವಲು ವ್ಯವಸ್ಥೆ ಇಲ್ಲ. ಹಾಗಾಗಿ ಇದು ಕೂಡ ಹಾರಂಗಿ ಭದ್ರತೆಗೆ ಸವಾಲು ಒಡ್ಡುವ ವಿಷಯವಾಗಿದೆ.

ರಾಜ್ಯದ ಸೂಕ್ಷö್ಮ ಕಟ್ಟಡಗಳ ಪೈಕಿ ಹಾರಂಗಿ ಅಣೆಕಟ್ಟೆಯೂ ಒಂದಾಗಿದ್ದು, ಸರ್ಕಾರದ ಆದೇಶ ಪಾಲನೆಗೋಸ್ಕರ ಮುಖ್ಯದ್ವಾರ ಮುಚ್ಚಿದರೆ ಮಾತ್ರ ಸಾಲದು, ಅಣೆಕಟ್ಟೆಗೆ ತೆರಳಲು ಸಾಧ್ಯವಾಗಬಹುದಾದ ಹಾರಂಗಿ ಸಾಕಾನೆ ಶಿಬಿರ ಸೇರಿದಂತೆ ಎಲ್ಲಾ ಮಾರ್ಗಗಳನ್ನೂ ಸದ್ಯದ ಉದ್ವಿಗ್ನ ಸ್ಥಿತಿ ಶಾಂತವಾಗುವ ತನಕವಾದರೂ ಬಂದ್ ಮಾಡುವ ಅಗತ್ಯ ಇದೆ ಎನ್ನುತ್ತಾರೆ ಸ್ಥಳೀಯರು. ಹಿನ್ನೀರು ಪ್ರದೇಶದಲ್ಲೂ ಭದ್ರತೆ ಹೆಚ್ಚಿಸುವ ಮೂಲಕ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಖಾತರಿಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.

ನಮಗೆ ಯಾವಾಗಲೂ ದೇಶವೇ ಮೊದಲು. ದೇಶದ ರಕ್ಷಣೆಗೆ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೂ ಎಲ್ಲರೂ ಕೈ ಜೋಡಿಸಬೇಕು. ಹಾರಂಗಿ ಅಣೆಕಟ್ಟೆಗೆ ಹೆಚ್ಚಿನ ಭದ್ರತೆ ಒದಗಿಸಿರುವುದರಿಂದ ಪ್ರವಾಸಿಗರನ್ನು ಒಳಗೆ ಬಿಡುತ್ತಿಲ್ಲ. ಪ್ರವಾಸಿಗರು ಈ ಸಂದರ್ಭದಲ್ಲಿ ಸಹಕಾರ ನೀಡಬೇಕು. ಪಕ್ಕದಲ್ಲಿ ಇರುವ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಅನಿಯಂತ್ರಿತ ಪ್ರವೇಶ ನಿರ್ಬಂಧಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಲಾಗುವುದು. ಈಗ ದೇಶದ ಭದ್ರತೆಯೇ ಮುಖ್ಯ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ

ಆಪರೇಷನ್ ಸಿಂಧೂರ ಬೆನ್ನಲ್ಲೇ ಎಲ್ಲಾ ಡ್ಯಾಂಗಳ ಭದ್ರತೆ ಹೆಚ್ಚಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಜಲಾಶಯ ಆವರಣಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಮಾತ್ರವಲ್ಲದೆ ಹೆಚ್ಚುವರಿ ಪೊಲೀಸರನ್ನು ಅಣೆಕಟ್ಟೆ ಭದ್ರತೆಗೆ ನಿಯೋಜಿಸಲಾಗಿದೆ. ರಜೆ ಮೇಲೆ ತೆರಳಿರುವ ಪೊಲೀಸರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಐ.ಕೆ. ಪುಟ್ಟಸ್ವಾಮಿ, ಕಾರ್ಯಪಾಲಕ ಅಭಿಯಂತರ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net