

ಮಡಿಕೇರಿ:
ಪ್ರವಾಸಿಗರ ಬೇಜವಾಬ್ದಾರಿ ವರ್ತನೆಗಳಿಂದ ಸುಂದರ ಪ್ರವಾಸಿ ತಾಣವೊಂದು 'ನಿರ್ಬಂಧಿತ ಪ್ರದೇಶ' ಆಗಿ ಪರಿವರ್ತನೆ ಆಗುವಂಥಾಗಿದೆ. ಆದರೂ ಅಧಿಕಾರಿಗಳು ಒಂದಿಷ್ಟು ಮೆದು ಧೋರಣೆ ತೋರಿಸಿ ಅಲ್ಲಿಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದರೂ ಜನರು ಇನ್ನೂ ಬುದ್ಧಿ ಕಲಿತಿಲ್ಲ. ಹಾರಂಗಿ ಹಿನ್ನೀರಿನ ಪ್ರಾಕೃತಿಕ ಶ್ರೀಮಂತಿಕೆ ಹೊಂದಿರುವ ಪ್ರದೇಶ ಮತ್ತೆ ಮೋಜು, ಮಸ್ತಿಯ ಜಾಗವಾಗಿದ್ದು, ಇಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಮೊದಲೆಲ್ಲಾ ಬಹುತೇಕ ಪ್ರವಾಸಿಗರಿಗೆ ಪಿಕ್‌ನಿಕ್ ಎಂದಾಗ ಕೂಡಲೇ ಹಾರಂಗಿ ಹಿನ್ನೀರು ಪ್ರದೇಶ ಮೊದಲು ನೆನಪಾಗುತ್ತಿತ್ತು. ಜಿಲ್ಲೆಯ ಪ್ರಮುಖ ವಾಣಿಜ್ಯ ಪಟ್ಟಣ ಕುಶಾಲನಗರದಿಂದ ಕೇವಲ 10 ಕಿಮೀ ದೂರದಲ್ಲಿ ಹಾರಂಗಿ ಹಿನ್ನೀರು ಪ್ರದೇಶ ಸಿಗುತ್ತದೆ. ಕಾರು ಮತ್ತು ಬೈಕ್‌ಗಳಲ್ಲಿ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. ಹಾಗಾಗಿ ಒಂದು ದಿನದ ಪ್ರವಾಸಕ್ಕೆ ಈ ಸ್ಥಳ ಹೇಳಿ ಮಾಡಿಸಿದಂತೆ ಇರುವುದರಿಂದ ಸಹಜವಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ವಿಶಾಲ ಹುಲ್ಲುಗಾವಲು, ನೀರೊಳಗೆ ಕಾಲಿಟ್ಟರೆ ಕಚಗುಳಿ ಇಡುವ ಪುಟ್ಟ ಅಲೆಗಳು, ದೂರದಲ್ಲಿ ಒಂದರ ಹಿಂದೆ ಚುಕ್ಕಿಗಳನ್ನು ಜೋಡಿಸಿಟ್ಟಂತೆ ಕಾಣುವ ಮೀನುಗಾರರ ತೆಪ್ಪಗಳು, ಮತ್ತೊಂದು ತುದಿಯಲ್ಲಿ ಗೋಡೆಯಂತೆ ನಿಂತಿರುವ ಅಣೆಕಟ್ಟೆ, ಸಂಜೆಯ ವೇಳೆಗೆ ಸೂರ್ಯಾಸ್ತ... ಹೀಗೆ ಇಲ್ಲಿ ಹಲವು ಆಕರ್ಷಣೆಗಳು ಪ್ರವಾಸಿಗರಿಗೆ ಅಚ್ಚುಮೆಚ್ಚು.
ಹಾರಂಗಿ ಅಣೆಕಟ್ಟೆ, ಜಲಾಶಯ ತುಂಬಿದಾಗ ಕ್ರಸ್ಟ್ಗೇಟ್‌ಗಳಿಂದ ಬೀಳುವ ನೀರು, ಅಲ್ಲಿಯ ಪಾರ್ಕ್, ಸಂಗೀತ ಕಾರಂಜಿ, ಆನೆ ಶಿಬಿರ ಒಂದು ರೀತಿಯಲ್ಲಿ ಪ್ರವಾಸಿಗರನ್ನು ತನ್ನತ್ತ ಸೆಳೆದರೆ, ಹಾರಂಗಿಯ ಹಿನ್ನೀರು ಕೂಡ ದೊಡ್ಡ ಸಂಖ್ಯೆಯಲ್ಲಿ ಆಸಕ್ತರನ್ನು ಆಕರ್ಷಿಸುವ ಪ್ರವಾಸಿ ತಾಣ ಆಗಿದೆ. ಜಿಲ್ಲೆ ಮಾತ್ರವಲ್ಲದೆ ಪಕ್ಕದ ಮೈಸೂರು, ಹಾಸನದಿಂದಲೂ ಪಿಕ್‌ನಿಕ್‌ಗೆ ಎಂದು ಇಲ್ಲಿಗೆ ಬಂದು ಹೋಗುತ್ತಾರೆ. ಹಿನ್ನೀರು ಪ್ರದೇಶದಲ್ಲಿ ಸಾಕಷ್ಟು ರೆಸಾರ್ಟ್, ಹೋಮ್‌ಸ್ಟೇಗಳೂ ಇದ್ದು ವರ್ಷದ ಬಹುತೇಕ ದಿನಗಳು ಪ್ರವಾಸಿಗರಿಂದ ತುಂಬಿರುತ್ತದೆ. ಇಂಥ ಪ್ರೇP್ಷÀಣೀಯ ತಾಣದಲ್ಲಿ ಕೆಲ ಬೇಜವಾಬ್ದಾರಿ ವ್ಯಕ್ತಿಗಳ ಎಲ್ಲೆ ಮೀರಿದ ವರ್ತನೆಗಳಿಂದಾಗಿ ಕಾವೇರಿ ನೀರಾವರಿ ನಿಗಮ 'ನಿರ್ಬಂಧಿತ ಪ್ರದೇಶ' ಎಂದು ಘೋಷಿಸಿತ್ತು.
'ನಿರ್ಬಂಧಿತ ಪ್ರದೇಶ' ಎಂದು ಹಿನ್ನೀರು ಪ್ರದೇಶದ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಿದ್ದರೂ ಇಲಾಖೆ ಇಲ್ಲಿಯ ತನಕ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ದೂರದ ಊರುಗಳಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಉಂಟು ಮಾಡುತ್ತಿರಲಿಲ್ಲ. ಆದರೆ ಅಧಿಕಾರಿಗಳ ಈ ಮೆದು ಧೋರಣೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಿಡಿಗೇಡಿಗಳು ಈ ಪ್ರದೇಶದಲ್ಲಿ ಮತ್ತೆ ತಮ್ಮ ಆಟಾಟೋಪ ಮುಂದುವರಿಸಿದ್ದಾರೆ. ಸಂಪೂರ್ಣ ಪ್ರದೇಶವೇ ಮೋಜು ಮಸ್ತಿಯ ತಾಣವಾಗಿ ಪರಿವರ್ತನೆ ಆಗಿದೆ.
ಒಮ್ಮೆ ಹಿನ್ನೀರು ಪ್ರದೇಶಕ್ಕೆ ಕಾಲಿಟ್ಟರೆಂದರೆ ಮುಗಿಯಿತು, ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ ಎಂದು ಕಿಡಿಗೇಡಿಗಳು ಭಾವಿಸಿದಂತಿದೆ. ಹಾಗಾಗಿ ಸ್ವೇಚ್ಛೆಯಿಂದ ವರ್ತಿಸುವವರಿಗೆ ಕಡಿವಾಣವೇ ಇಲ್ಲದಂತಾಗಿದೆ. ಈ ಕಾರಣದಿಂದ ಸುಂದರ ಪ್ರವಾಸಿ ತಾಣವೊಂದು ಕುಟುಂಬ ಸಮೇತ ಭೇಟಿ ನೀಡಲು ಬಯಸುವವರಿಂದ ದೂರವಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಕಂಡುಬರುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಮದ್ಯದ ಬಾಟಲಿಗಳೇ ಕಾಲಿಗೆ ಸಿಗುತ್ತದೆ. ಕುಡುಕರ ಪೌರುಷದ ಕುರುಹಾಗಿ ಒಡೆದ ಗಾಜಿನ ಬಾಟಲಿ ಚೂರುಗಳು ಅಲ್ಲಲ್ಲಿ ಬಿದ್ದಿರುವುದರಿಂದ ಎಚ್ಚರಿಕೆಯಲ್ಲೇ ನಡೆಯಬೇಕಾಗುತ್ತದೆ.
ಪೊದೆಗಳ ಮಧ್ಯೆ ಅನೈತಿಕ ಚಟುವಟಿಕೆ ಸಾಮಾನ್ಯ ಎನ್ನುವ ದೂರುಗಳು ಸ್ಥಳೀಯರಿಂದ ಕೇಳಿಬರುತ್ತದೆ. ಮದ್ಯಪಾನದ ಜೊತೆಯಲ್ಲಿ ಗಾಂಜಾ ಮತ್ತಿತರ ಮಾದಕ ಪದಾರ್ಥಗಳ ಸೇವನೆಯೂ ಇಲ್ಲಿ ಕಂಡುಬರುತ್ತದೆ ಎನ್ನಲಾಗುತ್ತದೆ. ಅಪಾಯಕಾರಿ ಪ್ರದೇಶದಲ್ಲಿ ಈಜಲು ತೆರಳಿ ಕೆಲವರು ಸಾವನ್ನಪ್ಪಿದ್ದಾರೆ. ಆಳಕ್ಕೆ ಇಳಿದು ಸ್ನಾನ ಮಾಡುವ ಹುಚ್ಚು ಸಾಹಸಗಳೂ ಇಲ್ಲಿ ಸಾಮಾನ್ಯ. ಸಾಕಷ್ಟು ಬಾರಿ ಇಂತಹ ದÊಶ್ಯಗಳು ಕಂಡುಬAದಾಗ ಸ್ಥಳೀಯರು ಅವರz್ದೆÃ ಆದ ರೀತಿಯಲ್ಲಿ ಬುದ್ಧಿಮಾತು ಹೇಳಿ ಕಳಿಸಿದ್ದೂ ಇದೆ.
ಪ್ರವಾಸಿಗರ ದುರ್ವರ್ತನೆ ಅಣೆಕಟ್ಟೆಯ ಭದ್ರತೆಗೂ ಸಮಸ್ಯೆ ತಂದೊಡ್ಡುವ ಆತಂಕದ ಮಾತುಗಳೂ ಕೇಳಿಬರುತ್ತಿದೆ. ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಟಿಬೆಟಿಯನ್ ನಿರಾಶ್ರಿತರೂ ಆಗಮಿಸಿ ಮೋಜು, ಮಸ್ತಿಯಲ್ಲಿ ತೊಡಗಿರುವುದು ಕಂಡು ಬರುತ್ತದೆ. ಇಲ್ಲಿಯೇ ಅಡುಗೆ ಮಾಡಿ, ಮದ್ಯ ಸೇವಿಸಿ, ಊಟ ಮಾಡಿ ಎಲ್ಲಾ ತ್ಯಾಜ್ಯವನ್ನು ಅಲ್ಲಿಯೇ ಬಿಟ್ಟು ತೆರಳುತ್ತಾರೆ. ಪಕ್ಕದಲ್ಲೇ ಅರಣ್ಯ ಪ್ರದೇಶ, ಕಾಫಿ ತೋಟಗಳು ಇದ್ದು, ಇಂಥ ಬೇಜವಾಬ್ದಾರಿ ವರ್ತನೆಯಿಂದ ಕಾಳ್ಗಿಜ್ಜು ಹತ್ತಿಕೊಂಡರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.
ಜೀವನದಿ ಕಾವೇರಿಯ ಪ್ರಮುಖ ಉಪನದಿಗಳಲ್ಲಿ ಹಾರಂಗಿಯೂ ಒಂದು. ಹಿನ್ನೀರಿನಲ್ಲಿ ವಾಹನಗಳನ್ನು ತೊಳೆಯುವುದು ಸೇರಿದಂತೆ ಪರಿಸರಕ್ಕೆ ಪೂರಕವಲ್ಲದ ಚಟುವಟಿಕೆಗಳನ್ನು ನಡೆಸುವುದರಿಂದ ಹಾರಂಗಿ ನದಿಯ ನೀರು ಮಲೀನ ಆಗುತ್ತಿದೆ. ಇದೇ ನೀರು ಮುಂದೆ ಕೂಡಿಗೆಯಲ್ಲಿ ಕಾವೇರಿಯನ್ನು ಸೇರಿ ಮುಂದಕ್ಕೆ ಹರಿಯುತ್ತದೆ. ಹಾಗಾಗಿ ಕಾವೇರಿ ನದಿ ಮಲೀನ ಆಗುವಲ್ಲಿ ಹಾರಂಗಿಯೂ ಕೊಡುಗೆ ಕೊಡುವಂತೆ ಆಗಿದೆ.
ಹಿನ್ನೀರಿನ ಉದ್ದಕ್ಕೂ ಅಲ್ಲಲ್ಲಿ ಪಂಪ್‌ಸೆಟ್‌ಗಳನ್ನು ಇಟ್ಟು ಅನಧಿಕೃತವಾಗಿ ನೀರು ಹಾಯಿಸುತ್ತಿರುವುದು ಕೂಡ ಸಾಮಾನ್ಯವಾಗಿದೆ. ಭಾರಿ ಸಾಮರ್ಥ್ಯದ ಯಂತ್ರಗಳನ್ನು ಬಳಸಿಕೊಂಡು ಹಿನ್ನೀರಿನ ಅಂಚಿನಲ್ಲಿರುವ ತೋಟಗಳು, ಶುಂಠಿ ಬೆಳೆ ಮತ್ತಿತರ ಚಟುವಟಿಕೆಗಳಿಗೆ ಈ ನೀರು ಬಳಸಿಕೊಳ್ಳಲಾಗುತ್ತಿದೆ. ಅವಧಿಗೂ ಮೊದಲೇ ಜಲಾಶಯ ಬರಿದಾಗಲು ಇದು ಕೂಡ ಒಂದು ಕಾರಣ ಎಂದು ಹೇಳಲಾಗುತ್ತಿದೆ.
ಇದೀಗ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. 'ನಿರ್ಬಂಧಿತ ಪ್ರದೇಶ' ಘೋಷಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತೀರ್ಮಾನಿಸಿದ್ದಾರೆ. ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಲು ಪೊಲೀಸರ ನೆರವು ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಒಂದು ವೇಳೆ ಅತಿಕ್ರಮ ಪ್ರವೇಶ ಕಂಡು ಬಂದರೆ ಕಾನೂನು ಪ್ರಕಾರ ಶಿಕ್ಷೆಯೂ ಆಗಲಿದೆ. ಈ ಮೂಲಕ ಕೆಲವರ ಬೇಜವಾಬ್ದಾರಿ ವರ್ತನೆಯಿಂದಾಗಿ ಸುಂದರ ಪ್ರವಾಸಿ ತಾಣವೊಂದು ತೆರೆ ಮರೆಗೆ ಸರಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.
ಹಿನ್ನೀರು ಪ್ರದೇಶ ಸೇರಿದಂತೆ ಹಾರಂಗಿ ಜಲಾಶಯ ವ್ಯಾಪ್ತಿಯ ನಿರ್ಬಂಧಿತ ಪ್ರದೇಶದಲ್ಲಿ ಸಾರ್ವಜನಿಕರ ಅನಧಿಕೃತ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಸಂಬAಧ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ನಿಷೇಧಿತ ಪ್ರದೇಶಕ್ಕೆ ಸಾರ್ವಜನಿಕರು ತೆರಳುವಂತಿಲ್ಲ. ವಿಷಯವನ್ನು ಪೊಲೀಸರಿಗೆ ತಿಳಿಸಲಾಗುವುದು. ಸಾರ್ವಜನಿಕರು ಅನಧಿಕೃತವಾಗಿ ಅಲ್ಲಿ ತಿರುಗಾಡುವುದನ್ನು ತಡೆಯುವಂತೆ ಪೊಲೀಸರಿಗೆ ಮನವಿ ಮಾಡಲಾಗುವುದು. ನಮ್ಮ ಇಲಾಖೆ ಕಡೆಯಿಂದಲೂ ಸಿಬ್ಬಂದಿ ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥರು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು.
ಪುಟ್ಟಸ್ವಾಮಿ, ಕಾರ್ಯಪಾಲಕ ಅಭಿಯಂತರ, ಹಾರಂಗಿ ಪುನರ್ವಸತಿ ವಿಭಾಗ