

ಮಡಿಕೇರಿ:
ಮಳೆಗಾಲದ ಸಂದರ್ಭದಲ್ಲಿ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯ ದೊಡ್ಡ ಸದ್ದು ಮಾಡುತ್ತದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದ್ದಂತೆಯೇ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವ ನೀರನ್ನು ನೇರವಾಗಿ ನದಿಗೆ ಹರಿಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಜಲಾಶಯಕ್ಕೆ ಬರುವ ನೀರನ್ನೆಲ್ಲಾ ಹೀಗೆ ನದಿಗೆ ಬಿಡುವುದಾದರೆ ಅಣೆಕಟ್ಟೆಯಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇಲ್ಲಿಯ ಈ ಅವೈಜ್ಞಾನಿಕ ನೀರು ನಿರ್ವಹಣೆ ಕಾರಣದಿಂದ ಭತ್ತ ಬೆಳೆಯುವ ಪ್ರದೇಶವೂ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಎನ್ನುವ ಆರೋಪವೂ ಕೇಳಿಬರುತ್ತಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾಗಿರುವ ಹಾರಂಗಿ ಅಣೆಕಟ್ಟೆಯನ್ನು ವ್ಯವಸಾಯಕ್ಕೆ ನೀರೊದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗೆ ಸೇರಿದ ೧,೩೪,೮೯೫ ಎಕರೆ ಪ್ರದೇಶದ ಕೃಷಿ ಜಮೀನಿಗೆ ಇಲ್ಲಿಂದ ನೀರು ಹರಿಸಬೇಕಾಗುತ್ತದೆ. ವರ್ಷಕ್ಕೆ ಒಟ್ಟು ೩೯.೩ ಟಿಎಂಸಿ ನೀರು ಹಾರಂಗಿ ಜಲಾನಯನ ಪ್ರದೇಶದಲ್ಲಿ ಸಂಗ್ರಹವಾಗುತ್ತದೆ. ಈ ಪೈಕಿ ೧೮ ಟಿಎಂಸಿ ನೀರನ್ನು ವ್ಯವಸಾಯದ ಉದ್ದೇಶಕ್ಕಾಗಿ ಬಳಸಲು ಯೋಚಿಸಿ ೧೯೬೯ರಲ್ಲಿ ಹುದುಗೂರು ಗ್ರಾಮದಲ್ಲಿ ಹಾರಂಗಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ೧೯೮೨ರಲ್ಲಿ ಜಲಾಶಯದ ಕಾರ್ಯನಿರ್ವಹಣೆ ಆರಂಭವಾಯಿತು. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ೮.೫ ಟಿಎಂಸಿ. ’ಡೆಡ್ ಸ್ಟೋರೇಜ್’ ಕಳೆದರೆ ೮.೦೭೩ ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ೨ ದಶಕದಷ್ಟು ಹಿಂದಿನ ತನಕವೂ ಇಲ್ಲಿಂದ ಬೇಸಿಗೆ ಬೆಳೆಗೆ ನೀರೊದಗಿಸಲಾಗುತ್ತಿತ್ತು.
ಸಾಮಾನ್ಯವಾಗಿ ಜುಲೈ ಮೊದಲ ವಾರದಲ್ಲಿ ಕಾಲುವೆಗಳಿಗೆ ನೀರು ಹರಿಸಿದರೆ ಭತ್ತ ಬೆಳೆಯುವ ರೈತರಿಗೆ ಅನುಕೂಲ ಆಗುತ್ತದೆ. ಮುಂಚಿತವಾಗಿ ನೀರು ಸಿಕ್ಕಿದರೆ ಭೂಮಿ ತಂಪಾಗುತ್ತದೆ. ಹೆಚ್ಚುವರಿ ನೀರು ಕಾಲುವೆಗಳ ಮೂಲಕ ಹರಿದು ಕೆರೆಗಳಿಗೆ ಸೇರುವ ಅವಕಾಶವೂ ಇರುತ್ತದೆ. ಆದರೆ ಇದಕ್ಕೆ ಹಾರಂಗಿ ಅಣೆಕಟ್ಟೆ ಅಧಿಕಾರಿಗಳು ಸಿದ್ಧತೆಯನ್ನೇ ನಡೆಸಿರುವುದಿಲ್ಲ. ಮೇ ಅಥವಾ ಜೂನ್‌ನಲ್ಲಿ ಕಾಲುವೆಗಳ ದುರಸ್ತಿ ಕಾರ್ಯ ಮುಗಿದಿರಬೇಕು. ಈಗ ಆಗಸ್ಟ್ ಮಧ್ಯದಿಂದ ಅಣೆಕಟ್ಟೆಯಿಂದ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ. ಹೀಗಾದರೆ ಭತ್ತ ಬೆಳೆಯುವುದು ಹೇಗೆ ಎನ್ನುವುದು ರೈತರ ಪ್ರಶ್ನೆ.
ಹಾರಂಗಿ ಜಲಾಶಯದಿಂದ ಸಮರ್ಪಕವಾಗಿ ನೀರು ಸಿಗದ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುವ ಜಾಗ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಬಹುತೇಕ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆ ಆಗುತ್ತಿದೆ. ಅಲ್ಪಕಾಲದ ವಾಣಿಜ್ಯ ಬೆಳೆಗಳಾದ ಶುಂಠಿ, ಮರಗೆಣಸು, ಸುವರ್ಣಗೆಡ್ಡೆ, ಸಿಹಿಗೆಣಸು, ಕೆಸವು ಕಡೆಗೆ ರೈತರು ಆಕರ್ಷಿತರಾಗುತ್ತಿದ್ದಾರೆ. ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಆಹಾರದ ಕೊರತೆ ಮಾತ್ರವಲ್ಲದೆ ಪರಿಸರದ ಮೇಲೂ ವಿವಿಧ ರೀತಿಯ ಪರಿಣಾಮಗಳು ಆಗುತ್ತಿದೆ.
ಹಾರಂಗಿ ನೀರನ್ನು ನೀರಾವರಿಗೆ ಬಳಸಿಕೊಳ್ಳುವ ಪ್ರಯತ್ನ ನೂರು ವರ್ಷಗಳ ಹಿಂದೆಯೇ ನಡೆದಿರುವ ಬಗ್ಗೆ ದಾಖಲೆಗಳಿವೆ. ನೀರಾವರಿ ಉದ್ದೇಶಕ್ಕಾಗಿ ನೀರನ್ನು ತಿರುಗಿಸಲು ಅಥವಾ ತಡೆಹಿಡಿಯಲು ಸಣ್ಣ ಕಟ್ಟೆಗಳನ್ನು ಕಟ್ಟಿರುವ ಕುರುಹುಗಳು ನಾಕೂರು ಭಾಗದಲ್ಲಿ ಕಂಡುಬರುತ್ತದೆ. ಕೊಡಗು ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿರುವ ಈ ಸಣ್ಣ ಕಟ್ಟೆಗಳಿಗೆ ತೂಬುಗಳ ನಿರ್ಮಾಣಕ್ಕೆ ೧೮೮೪ರಲ್ಲಿ ಪ್ರಸ್ತಾವನೆ ಸಲ್ಲಿಸಿದ ಮಾಹಿತಿಗಳು ಕಂಡುಬರುತ್ತದೆ. ಹೇರೂರು ಗ್ರಾಮದಿಂದ ೬.೪ ಕಿಮೀ ದೂರದ ಹಾರಂಗಿ ಗ್ರಾಮದಲ್ಲಿ ಅಣೆಕಟ್ಟೆ ನಿರ್ಮಿಸಿ ೫,೫೦೦ ಎಕರೆ ಪ್ರದೇಶಕ್ಕೆ ನೀರೊದಗಿಸುವಂತೆ ೧೯೦೯ರಲ್ಲಿ ಸ್ಥಳೀಯರು ಅದರಲ್ಲೂ ವಿಶೇಷವಾಗಿ ಕಣಿವೆ ಹೋಬಳಿಯ ರೈತರು ಅಂದಿನ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಕೂಡ ಈ ವಿಷಯದಲ್ಲಿ ಆಸಕ್ತಿ ತೋರಿಸಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇಟ್ಟಿಮಡು ಮಂಟಿ ಎಂಬಲ್ಲಿ ಅಣೆಕಟ್ಟೆ ನಿರ್ಮಿಸಲು ಸಹಕರಿಸುವಂತೆ ೧೯೪೭ರಲ್ಲಿ ಅಂದಿನ ಕೊಡಗು ಸರ್ಕಾರ ಕೇಂದ್ರ ಜಲ ಮತ್ತು ವಿದ್ಯುತ್ ಆಯೋಗಕ್ಕೆ ಮನವಿ ಕೂಡ ಸಲ್ಲಿಸಿತ್ತು.
ಹಾರಂಗಿ ಅಣೆಕಟ್ಟೆಯಿಂದ ಕುಶಾಲನಗರ ಪ್ರವಾಹಪೀಡಿತ ಪ್ರದೇಶ ಆಗಲು ಸಾಧ್ಯವಿಲ್ಲ. ಏಕೆಂದರೆ ಹಾರಂಗಿ ನದಿ ಕಾವೇರಿಯನ್ನು ಸೇರುವುದೇ ಕೂಡಿಗೆಯಲ್ಲಿ. ಕುಶಾಲನಗರ ಪ್ರವಾಹ ಪೀಡಿತ ಪ್ರದೇಶ ಆಗಲು ಕಾವೇರಿ ನದಿ ತಟದ ಗದ್ದೆಗಳನ್ನೆಲ್ಲಾ ಬಡಾವಣೆ ಮಾಡಿ ನದಿ ಪಾತ್ರವನ್ನ ಕಿರಿದು ಮಾಡಿರುವುದೇ ಕಾರಣ. ಇನ್ನು ಈ ಅಣೆಕಟ್ಟೆಯ ನೀರಿನ ಬಳಕೆ ಹಾಸನ ಜಿಲ್ಲೆಯ ಕೊಣನೂರು, ರಾಮನಾಥಪುರ ಹಾಗೂ ಮುಂದಿನ ಊರುಗಳಿಗೆ ಅನುಕೂಲ ಆಗಿದೆ. ಆದರೆ ಕೊಡಗಿನ ಗ್ರಾಮಗಳಿಗೆ ಅಷ್ಟೇನೂ ಪ್ರಯೋಜನ ಆಗಿಲ್ಲ.
ಎಸ್. ಎಂ. ಉಮಾಶಂಕರ್, ಕೃಷಿಕ. ಶಿಡಿಗಳಲೆ
ಹಾರಂಗಿ ಜಲಾಶಯದಿಂದ ಕೊಡಗು ಜಿಲ್ಲೆಗೆ ಶೂನ್ಯ ಉಪಯೋಗ. ಮಳೆಗಾಲದಲ್ಲಿ ನೀರು ಹೆಚ್ಚಾಗಿ, ಬೇಸಿಗೆಯಲ್ಲಿ ನೀರು ಇಲ್ಲದೇ ಬೆಳೆ ಬೆಳೆಯಲು ಸಾಧ್ಯವಿಲ್ಲ. ಹಾರಂಗಿ ಅಣೆಕಟ್ಟೆಯಲ್ಲಿ ಹೂಳು ತುಂಬಿ ನೀರು ಶೇಖರಣೆಯೂ ಕಡಿಮೆಯಾಗಿದೆ. ಸರ್ಕಾರದಿಂದ ವೈಜ್ಞಾನಿಕ ತಂಡವನ್ನು ಕರೆಯಿಸಿ ಸ್ಥಳೀಯರಿಗೂ ಇದರ ಉಪಯೋಗ ಸಿಗುವಂತೆ ಮಾಡಬೇಕು.
ಕೆ.ವಿ. ಉಮೇಶ್ ಭಟ್, ಹೆಬ್ಬಾಲೆ.
ಅಂಗೈಯಲ್ಲಿ ಬೆಣ್ಣೆ ಇದ್ದು ತುಪ್ಪಕ್ಕೆ ಹುಡುಕಿದ ಹಾಗೆ ಹಾರಂಗಿ ಬುಡದಲ್ಲಿ ಕುಶಾಲನಗರ ಇದ್ದರೂ, ಇಲ್ಲಿಯ ಕುಡಿಯುವ ನೀರು ಇಲ್ಲದೆ ದುಡ್ಡು ಕೊಟ್ಟು ತರುವ ಹಾಗೆ ಪರಿಸ್ಥಿತಿ ಇದೆ. ಯೋಜನೆ ರೂಪಿಸಿ ವರ್ಷಗಳೇ ಕಳೆದರೂ ಅನುಷ್ಠಾನ ಆಗದಿರುವುದು ಬೇಸರದ ಸಂಗತಿ. ಹಾರಂಗಿಯಿಂದ ನಗರದಲ್ಲಿ ಪ್ರವಾಹ ಸೃಷ್ಟಿಯಾಗಿ ಜಲಾಶಯದ ಬಗ್ಗೆ ಮತ್ತಷ್ಟು ಬೇಸರ ಮೂಡಿಸಿದೆ.
ಉಮಾ, ಗೃಹಿಣಿ, ಕುಶಾಲನಗರ.
ನೀರಾವರಿ ಉದ್ದೇಶಕ್ಕೆ ನಿರ್ಮಾಣವಾಗಿರುವ ಹಾರಂಗಿ ಜಲಾಶಯ ನಿಜಕ್ಕೂ ಕೊಡಗಿನ ಪಾಲಿಗೆ ಶಾಪವಾಗಿದೆ. ಏಕೆಂದರೆ ಎಳೆ ಕಂದಮ್ಮ ತನ್ನ ತಾಯಿಯ ಹಾಲು ಇದ್ದರೂ ಹಸಿವಿನಿಂದ ಬಳಲುವಂತ ಪರಿಸ್ಥಿತಿ ಎದುರಾಗಿದೆ. ನಮ್ಮ ಕೊಡಗಿನ ಜನತೆಯ ಬಳಕೆಗೆ ಹಾರಂಗಿಯ ನೀರು ಉಪಯೋಗವಾಗುತ್ತಿಲ್ಲ. ಇದಕ್ಕೆಲ್ಲ ಕಾರಣ ಹಾರಂಗಿ ಜಲಾಶಯದ ಅವೈಜ್ಞಾನಿಕ ನಿರ್ಮಾಣ. ಕಾಲ ಮಿಂಚಿ ಹೋಗುವ ಮುನ್ನ ನಾವೆಲ್ಲ ಎಚ್ಚೆತ್ತುಕೊಳ್ಳೋಣ. ಇಲ್ಲ ಅಂದರೆ ಪರಿಸ್ಥಿತಿ ಮುಂದೊಂದು ದಿನ ಅಧೋಗತಿಗೆ ಹೋಗುವ ಸಾಧ್ಯತೆ ಇದೆ.
ಹಾಜಿರಾ ಶರೀಫ್, ವಕೀಲರು, ವೀರಾಜಪೇಟೆ
ಕೊಡಗು ಮಳೆಯಾಶ್ರಿತ ಪ್ರದೇಶ. ಮೊದಲು ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ನೀರಿಗೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಇತ್ತೀಚೆನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಳೆ ಏರುಪೇರಾಗಿ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಿರುವಾಗ ಜಿಲ್ಲೆಯಲ್ಲಿ ಇರುವ ಹಾರಂಗಿ ಜಲಾಶಯದಿಂದ ಜಿಲ್ಲೆಯ ರೈತರಿಗೆ ಅದರಲ್ಲೂ ದಕ್ಷಿಣ ಕೊಡಗಿನ ಭಾಗದವರಿಗೆ ಯಾವುದೇ ಪ್ರಯೋಜನವಿಲ್ಲ. ಜಿಲ್ಲೆಯ ವಸತಿ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಸುವುದರಿಂದ ಅವಾಂತರವೇ ಹೆಚ್ಚು.
ಪವಿತ್ರ. ಎಂ.ಯು., ಗೃಹಿಣಿ, ಕಾನೂರು
ಕೊಡಗಿನಲ್ಲಿ ಈ ವರ್ಷ ಮಳೆ ಕಡಿಮೆಯಾಗಿದ್ದು ನೀರಿನ ಹಿತಮಿತ ಬಳಕೆಯ ಅವಶ್ಯಕತೆ ಇದೆ. ಆದಷ್ಟು ಬೇಗನೆ ಕಾಲುವೆ ನದಿ ಮುಖಾಂತರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲದೆ ನಷ್ಟ ಅನುಭವಿಸುವಂತಾಗುತ್ತದೆ.
ಶಿಯಾಬುದ್ದಿನ್, ಅಧ್ಯಕ್ಷ, ನೆಲ್ಯಹುದಿಕೇರಿ ನಗರ ಜೆಡಿಎಸ್
ಹಾರಂಗಿ ಯೋಜನಾ ವೃತ್ತದ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸುವ ಮೂಲಕ ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಅವಕಾಶ ಮಾಡಿಕೊಡಲಾಗಿದೆ. ಮಳೆ ಅಭಾವದಿಂದ ನೀರಿನ ಕೊರತೆ ಎದುರಿಸುತ್ತಿರು ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗ ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಲಾಶಯದ ನೀರಿನ ಮಟ್ಟ ಕಾಯ್ದುಕೊಂಡು ಕಾಲುವೆ ಮತ್ತು ನದಿಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾರಂಗಿ ಜಲಾಶಯದಿಂದ ಮುಂದಿನ ೧೫ ದಿನಗಳ ಕಾಲ ಪ್ರತಿ ದಿನ ೧೫೦೦ ಕ್ಯೂಸೆಕ್ ನೀರು ಬಿಡಲಾಗುವುದು.
ಡಾ. ಮಂತರ್ ಗೌಡ, ಶಾಸಕ, ಮಡಿಕೇರಿ ಕ್ಷೇತ್ರ
ಅಣೆಕಟ್ಟೆಗೆ ಬರುವ ನೀರೆಲ್ಲವನ್ನೂ ನದಿಗೆ ಬಿಡುವುದಾದರೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಡ್ಯಾಮ್ ಏಕೆ ಕಟ್ಟಬೇಕಿತ್ತು? ಹೊಲವಾಗಿದ್ದ ಜಮೀನನ್ನು ಗದ್ದೆಯಾಗಿ ಏಕೆ ಮಾರ್ಪಾಡು ಮಾಡಬೇಕಿತ್ತು ?
ಹಾರಂಗಿ ಜಲಾಶಯಕ್ಕೆ ಬರುವ ನೀರನ್ನು ಪ್ರತಿ ವರ್ಷವೂ ನೇರವಾಗಿ ನದಿಗೆ ಬಿಡಲಾಗುತ್ತಿದೆ. ಈ ನೀರಿನಿಂದ ಕಳೆದ ಇಪ್ಪತ್ತು ವರ್ಷದಿಂದ ನಷ್ಟ ಅನುಭವಿಸಿದ ರೈತರೇ ಹೆಚ್ಚು. ಸಕಾಲಕ್ಕೆ ನೀರು ಬಿಡುವುದಿಲ್ಲ, ಬೇಕಿಲ್ಲದ ಸಮಯದಲ್ಲಿ ನೀರನ್ನು ಹರಿಸಲಾಗುತ್ತದೆ. ಇವೆಲ್ಲವೂ ಬೇಕೇ? ರೈತಾಪಿ ಜನರು ಮಳೆಗಾಗಿ, ಬೆಳೆಗಾಗಿ ಒದ್ದಾಡುತ್ತಿದ್ದಾರೆ. ಈ ಡ್ಯಾಮ್‌ಗಳಿಂದ ಉಪಯೋಗವೇನು ?
ಡಾ. ಹರೀಶ್ ಕುಮಾರ ಬಿ.ಕೆ., ಸೀಕೋ ಸಂಸ್ಥೆ
ಹಾರಂಗಿ ಆಣೆಕಟ್ಟೆ ಕಟ್ಟದೆ ಇದ್ದಿದ್ದರೆ ಈ ಭಾಗದಲ್ಲಿ ಬೀಳುವ ಮಳೆ ನೀರು ಯಾವುದೇ ಪ್ರಯೋಜನಕ್ಕೆ ಬಾರದೇ ಸಮುದ್ರದ ಪಾಲಾಗುತ್ತಿತ್ತು. ಹಾರಂಗಿ ಆಣೆಕಟ್ಟೆಯಿಂದ ನೂರಾರು ಜನರಿಗೆ ತೊಂದರೆಯಾದರೆ ಸಾವಿರಾರು ರೈತರಿಗೆ ಒಳ್ಳೆಯದಾಗಿದೆ. ಅನೇಕ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಸಾಧ್ಯವಾಗಿದೆ. ಹಲವು ಜಿಲ್ಲೆಯ ರೈತರ ಬಡತನ ನಿಗಿಸುವಲ್ಲಿ ಹಾರಂಗಿ ಪ್ರಮುಖ ಪಾತ್ರವಹಿಸಿದೆ.
ಸಿದ್ದರಾಜು, ಅಸಿಸ್ಟೆಂಟ್ ಎಂಜಿನಿಯರ್, ಕಾವೇರಿ ನೀರಾವರಿ ನಿಗಮ, ಹಾರಂಗಿ.