

ಮಡಿಕೇರಿ
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳ ಪೈಕಿ ಒಂದಾದ ಹಾರಂಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ಟೋಬರ್ ತಿಂಗಳಿನಲ್ಲೂ ಭರ್ತಿ ಆಗುವ ಮೂಲಕ ಸಾಧನೆ ಮಾಡಿದೆ. ಸಾಮಾನ್ಯವಾಗಿ ಮುಂಗಾರು ಮಳೆಯ ಅಬ್ಬರಕ್ಕೆ ಮೈತುಂಬಿಸಿಕೊಳ್ಳುವ ಅಣೆಕಟ್ಟೆ ಈ ವರ್ಷ ಹಿಂಗಾರು ಮಳೆಗೂ ಸಂಪೂರ್ಣ ತುಂಬಿಕೊAಡಿದೆ. 2859 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಪ್ರಸ್ತುತ 2858.37 ಅಡಿಗಳಷ್ಟು ನೀರಿದ್ದು, ಕಳೆದ ವರ್ಷ ಇದೇ ದಿನ 2832 ಅಡಿ ನೀರಿತ್ತು.
ಈ ವರ್ಷ ಮೇ ತಿಂಗಳಿನಿAದಲೇ ಜಿಲ್ಲೆಯಲ್ಲಿ ಮಳೆಗಾಲ ಆರಂಭ ಆಗಿರುವುದರಿಂದ ಹಾರಂಗಿ ಜಲಾಶಯ ನಿರ್ಮಾಣದ ನಂತರ ಮೇ ತಿಂಗಳಿನಲ್ಲಿ ಸಂಪೂರ್ಣ ಭರ್ತಿ ಆಗುವ ಮೂಲಕ ದಾಖಲೆ ಬರೆದಿತ್ತು.
ಇದೀಗ ಅಕ್ಟೋಬರ್ ಮುಗಿಯುತ್ತಾ ಬಂದಿದ್ದರೂ ಕೊಡಗಿನಲ್ಲಿ ಮಳೆ ಇನ್ನೂ ಮುಂದುವರಿದಿದೆ. ಸ್ಥಳೀಯರಿಗೆ ಮಳೆಗಾಲ ಶುರುವಾಗುತ್ತಿದೆಯಾ ? ಮುಗಿಯುತ್ತಿದೆಯಾ ? ಎನ್ನುವ ಗೊಂದಲ ಮೂಡಿಸುವಷ್ಟರ ಮಟ್ಟಿಗೆ ಮಳೆಯ ಅಬ್ಬರ ಕಂಡು ಬರುತ್ತಿದೆ. ಇದರ ಪರಿಣಾಮವಾಗಿ ಹಾರಂಗಿ ಜಲಾಶಯ ಈಗ ಮತ್ತೆ ಅಕ್ಟೋಬರ್‌ನಲ್ಲೂ ಭರ್ತಿ ಆಗಿದೆ.
ಜಿಲ್ಲೆಯ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಸೇರಿದಂತೆ ಹಾರಂಗಿಯ ಜಲಾನಯನ ಪ್ರದೇಶದಲ್ಲಿ ಕಳೆದ 2-3 ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಇದರಿಂದಾಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಏರಿಕೆ ಆಗಿದ್ದು, ಈಗಾಗಲೇ ಬಹುತೇಕ ತುಂಬಿಕೊAಡಿದ್ದ ಜಲಾಶಯ ಈಗ ಸಂಪೂರ್ಣ ಭರ್ತಿ ಆಗಿದೆ. ಕಳೆದ ಒಂದು ವಾರದಿಂದ 3 ಅಂಕಿ ಒಳಗಡೆಯೇ ಇದ್ದ ಒಳಹರಿವಿನ ಪ್ರಮಾಣ ಗುರುವಾರ ಏಕಾಏಕಿ 4 ಅಂಕಿಗೆ ಏರಿದೆ.
2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಗುರುವಾರ ಬೆಳಗ್ಗೆಯ ಮಾಹಿತಿ ಪ್ರಕಾರ 2,858.37 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2,832 ಅಡಿಗಳಷ್ಟು ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 5,820 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 808 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಗುರುವಾರ ಮುಂಜಾನೆ 6 ಗಂಟೆಗೆ 8,220 ಕ್ಯೂಸೆಕ್ ನೀರಿನ ಒಳಹರಿವು ಇತ್ತು. ನದಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಯಿತು.
ಕಾಲುವೆಗೆ 637 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 7.536 ಟಿಎಂಸಿ ಬಳಕೆಯೋಗ್ಯ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 6.798 ಟಿಎಂಸಿ ನೀರಿನ ಸಂಗ್ರಹ ಇತ್ತು. 232 ಕ್ಯೂಸೆಕ್ ನೀರಿನ ಒಳಹರಿವು ಇತ್ತು. ನದಿಗೆ 300 ಹಾಗೂ ಕಾಲುವೆಗೆ 800 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು.
ಕೊಡಗಿನ ಏಕೈಕ ದೊಡ್ಡ ಅಣೆಕಟ್ಟೆ ಹೆಗ್ಗಳಿಕೆಯ ಹಾರಂಗಿಯಲ್ಲಿ ಕಳೆದ ಬೇಸಿಗೆಯಲ್ಲಿ ನೀರಿನ ಸಂಗ್ರಹ ಕಾಪಾಡಿಕೊಂಡು ಬರಲಾಗಿತ್ತು. 2024ಕ್ಕೆ ಹೋಲಿಸಿದರೆ ಈ ಬೇಸಿಗೆಯಲ್ಲಿ ಅಧಿಕ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿತ್ತು. ಬೇಸಿಗೆಯ ಬಿರುಬಿಸಿಲಿಗೆ ಜೀವನದಿ ಕಾವೇರಿ ವಾಲ್ನೂರು ಬಳಿಯಿಂದ ತನ್ನ ಹರಿವು ಕ್ಷೀಣಿಸಿದ್ದರೂ ಕಾವೇರಿಯ ಉಪನದಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿಯೇ ಇತ್ತು. ಹಾಗಾಗಿಯೇ ಮೇ ತಿಂಗಳಿನಲ್ಲಿ ಉತ್ತಮ ಮಳೆ ಆಗುತ್ತಿದ್ದಂತೆಯೇ ಜಲಾಶಯ ಬೇಗನೇ ಭರ್ತಿ ಆಗಿತ್ತು. ಮತ್ತೆ ಕೂಡ ನಿರಂತರ ಮಳೆ ಆಗುತ್ತಿರುವುದರಿಂದ ಈ ಬಾರಿ ಅಕ್ಟೋಬರ್‌ನಲ್ಲೂ ಜಲಾಶಯ ಭರ್ತಿ ಆಗುವಂತೆ ಆಗಿದೆ ಎನ್ನುತ್ತಾರೆ ಅಧಿಕಾರಿಗಳು.
ಅ.22ರಿಂದ ಅ.26ರ ತನಕದ ಹವಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕೊಡಗಿನಲ್ಲಿ ಮೋಡ ಕವಿತ ವಾತಾವರಣ ಇರಲಿದ್ದು, ಸಾಧಾರಣದಿಂದ ಭಾರಿ ಮಳೆ ಬರುವ ನಿರೀಕ್ಷೆ ಇದೆ. ಇದು ಹಾರಂಗಿ ಜಲಾಶಯದ ಮೇಲೂ ಪರಿಣಾಮ ಬೀರಲಿದ್ದು, ಈಗಿನಂತೆಯೇ ಸಂಪೂರ್ಣ ಭರ್ತಿ ಆಗಿಯೇ ಮುಂದುವರಿಯುವುದಕ್ಕೆ ಸಹಕಾರಿ ಆಗಲಿದೆ.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಾರಂಗಿ ಜಲಾಶಯದಿಂದ ನೀರಾವರಿಯ ಅನುಕೂಲತೆ ಇದೆ.
ಇಷ್ಟು ಪ್ರದೇಶದಲ್ಲಿ ಒಂದು ಬೆಳೆ ಬೆಳೆÀಯಲು ವರ್ಷಕ್ಕೆ 18 ಟಿಎಂಸಿ ನೀರು ಬೇಕಾಗುತ್ತದೆ. 8.5 ಟಿಎಂಸಿ ಸಾಮರ್ಥ್ಯದ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ಭರ್ತಿ ಆದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರು ಸಮೃದ್ಧ ಬೆಳೆ ತೆಗೆಯಬಹುದು. ಈ ವರ್ಷ ಜಲಾಶಯಕ್ಕೆ ಒಟ್ಟು 45.312 ಟಿಎಂಸಿ ನೀರು ಹರಿದು ಬಂದಿದೆ. ಕಾಲುವೆಗಳಲ್ಲಿ ಇಲ್ಲಿಯ ತನಕ 5.135 ಟಿಎಂಸಿ ನೀರು ಹರಿಸಲಾಗಿದೆ. ಬೇಸಿಗೆ ಬೆಳೆಗೆ ಜಲಾಶಯದಿಂದ ನೀರು ಕೊಡುವುದನ್ನು ನಿಲ್ಲಿಸಿ 3 ದಶಕಗಳೇ ಕಳೆದಿದ್ದು ಈ ಬಾರಿ ಬೇಸಿಗೆ ಬೆಳೆಗೆ ನೀರು ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 53.69 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.41 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2998.59 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2953.92 ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 38.28 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 45.15 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 33.26 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 70.35 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 81.40 ಮಿ.ಮೀ. ಸರಾಸರಿ ಮಳೆಯಾಗಿದೆ. ಮಡಿಕೇರಿ ಕಸಬಾ 61, ನಾಪೋಕ್ಲು 35.60, ಸಂಪಾಜೆ 31.50, ಭಾಗಮಂಡಲ 25, ವಿರಾಜಪೇಟೆ 44.80, ಅಮ್ಮತ್ತಿ 45.50, ಹುದಿಕೇರಿ 33, ಶ್ರೀಮಂಗಲ 29, ಪೊನ್ನಂಪೇಟೆ 40, ಬಾಳೆಲೆ 31.04, ಸೋಮವಾರಪೇಟೆ 88.40, ಶನಿವಾರಸಂತೆ 65, ಶಾಂತಳ್ಳಿ 68, ಕೊಡ್ಲಿಪೇಟೆ 60, ಕುಶಾಲನಗರ 86.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 76.20 ಮಿ.ಮೀ. ಮಳೆಯಾಗಿದೆ.
ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗಿರುವುದರಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಗುರುವಾರ ಬೆಳಗ್ಗೆ 6 ಗಂಟೆಗೆ ಅಣೆಕಟ್ಟೆಗೆ 8,220 ಕ್ಯೂಸೆಕ್ ನೀರಿನ ಒಳಹರಿವು ಇತ್ತು. ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲಾಯಿತು. ಇದೇ ಮೊದಲ ಬಾರಿಗೆ ಮಳೆಗಾಲದ ನಂತರ ಅಕ್ಟೋಬರ್ ತಿಂಗಳಿನಲ್ಲೂ ಜಲಾಶಯ ಭರ್ತಿ ಆಗಿದ್ದು, ನದಿಗೆ ನೀರು ಹರಿಸಲಾಗಿದೆ.
ಐ.ಕೆ. ಪುಟ್ಟಸ್ವಾಮಿ, ಇಇ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ
ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಚಂಡಮಾರುತ ಚಲಿಸುವ ಪಥದ ನಿಖರತೆಯ ಮೇಲೆ ಮುಂದಿನ 10 ದಿನಗಳವರೆಗೂ ಮಲೆನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆಗಳಿವೆ.
ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಈಗಿನಂತೆ ಉತ್ತರಾಭಿಮುಖವಾಗಿ ಚಲಿಸುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯಲ್ಲಿ 2 ಚಂಡಮಾರುತಗಳು ಅ. 24ರಂದು ಒಟ್ಟು ಸೇರಿ ಪ್ರಬಲ ಚಂಡಮಾರುತವಾಗಿ ಪರಿವರ್ತನೆಗೊಳ್ಳವ ಲಕ್ಷಣಗಳಿವೆ. ಚಲಿಸುವ ಪಥ ನಿಶ್ಚಿತವಾಗಿಲ್ಲ. ಕೊಡಗಿನಲ್ಲಿ ಮೋಡ ಕವಿತ ವಾತಾವರಣ ಇರಲಿದ್ದು, ಸಾಧಾರಣದಿಂದ ಭಾರಿ ಮಳೆ ಬರುವ ನಿರೀಕ್ಷೆ ಇದೆ.
ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು