ಕೃಷಿ ಕಾರ್ಯಕ್ಕೆ ಇನ್ನೂ ಹರಿಯದ ನೀರು

harangi
Published on

ಮಡಿಕೇರಿ:

ಕೃಷಿ ಉದ್ದೇಶಕ್ಕಾಗಿ ಹಾರಂಗಿ ಅಣೆಕಟ್ಟೆಯಿಂದ ಕಾಲುವೆಗಳಿಗೆ ನೀರು ಹರಿಸಲು ಜಲಾಶಯ ಭರ್ತಿ ಆಗುವ ತನಕ ಕಾಯುವುದು ಸಾಮಾನ್ಯ. ಈ ಹಿಂದಿನ ವರ್ಷಗಳಲ್ಲಿ ಜೂನ್ ಅಂತ್ಯಕ್ಕೂ ಅಣೆಕಟ್ಟೆ ತುಂಬುತ್ತಿರಲಿಲ್ಲ. ಹಾಗಾಗಿ ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಕಾಲುವೆಗಳಿಗೆ ನೀರು ಬಿಡಲಾಗುತ್ತಿತ್ತು. ತಡವಾಗಿ ನೀರು ಹರಿಸುವುದರಿಂದ ಅಚ್ಚುಕಟ್ಟ ಪ್ರದೇಶದ ರೈತರ ಮೇಲೆ ಹಲವು ರೀತಿಯಲ್ಲಿ ಪರಿಣಾಮಗಳು ಆಗುತ್ತಿದ್ದವು. ಆದರೆ ಈ ವರ್ಷ ಪರಿಸ್ಥಿತಿ ಬೇರೆ ರೀತಿಯಲ್ಲಿ ಇದೆ.

ಮುಂಗಾರು ಪೂರ್ವ ಮಳೆಯಿಂದಾಗಿ ಹಾರಂಗಿ ಅಣೆಕಟ್ಟೆ ಮೇ ತಿಂಗಳಿನಲ್ಲೇ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಿದೆ. ಇದೇ ಮೊದಲ ಸಲ ಜೂನ್ ತಿಂಗಳಲ್ಲಿ ಅಣೆಕಟ್ಟೆಯಿಂದ ನದಿಗೆ ನೀರು ಹರಿಸಲಾಗಿದೆ. ಜೂನ್ ಮತ್ತು ಈಗ ಜುಲೈನಲ್ಲೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಕೂಡ ಉತ್ತಮ ಮಟ್ಟದಲ್ಲಿ ಇದೆ. ಆದರೆ ಕೃಷಿ ಉದ್ದೇಶಕ್ಕೆ ಇನ್ನು ಕೂಡ ಜಲಾಶಯದಿಂದ ನೀರು ಬಿಟ್ಟಿಲ್ಲ. ಆದರೆ ನದಿಗೆ ಇಲ್ಲಿಯ ತನಕ ದಾಖಲೆಯ 13.931 ಟಿಎಂಸಿ ನೀರು ಹರಿಸಲಾಗಿದೆ.

2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಸೋಮವಾರದ ಮಾಹಿತಿ ಪ್ರಕಾರ 2,854.03 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2,854.08 ಅಡಿಗಳಷ್ಟು ನೀರಿತ್ತು. ಪ್ರಸ್ತುತ ಜಲಾಶಯಕ್ಕೆ 3,812 ಕ್ಯೂಸೆಕ್ ನೀರಿನ ಒಳಹರಿವು ಇದ್ದು, ನದಿಗೆ 3,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಾಲುವೆಗೆ ಯಾವುದೇ ನೀರು ಹರಿಸುತ್ತಿಲ್ಲ. ಕಳೆದ ವರ್ಷ ಇದೇ ದಿನ 4,691 ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇತ್ತು. ನದಿಗೆ 200 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 6.818 ಟಿಎಂಸಿ ನೀರಿದೆ. ಕಳೆದ ವರ್ಷ ಈ ಅವಧಿಯಲ್ಲಿ 6.835 ಟಿಎಂಸಿ ನೀರಿತ್ತು.

ಕೊಡಗು, ಮೆಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿನ ರೈತರು ಹಾರಂಗಿ ಅಣೆಕಟ್ಟೆಯ ನೀರಿನ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇಷ್ಟು ಜಾಗದಲ್ಲಿ ಸಮದ್ಧವಾಗಿ ಬೆಳೆ ತೆಗೆಯಬೇಕು ಅಂದರೆ 15 ಟಿಎಂಸಿ ನೀರಿನ ಅಗತ್ಯ ಇದೆ. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಹಾರಂಗಿ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ತುಂಬಿದರೆ ಮಾತ್ರ ಇದು ಸಾಧ್ಯವಾಗುತ್ತದೆ. ಈ ಬಾರಿಯ ಮಳೆ ಪ್ರಮಾಣ ಗಮನಿಸಿದರೆ ಇದು ಕಷ್ಟವೇನೂ ಅಲ್ಲ ಎನ್ನುತ್ತಾರೆ ಹಾರಂಗಿ ಅಧಿಕಾರಿಗಳು.

ಹಾರಂಗಿಯಲ್ಲಿ ಸಮೃದ್ಧ ನೀರು ಇರುವುದರಿಂದ ಈ ಸಮಯದಲ್ಲಿ ಕಾಲುವೆಗಳ ಮೂಲಕ ನೀರು ಹರಿಸಬೇಕಿತ್ತು. ಇದರಿಂದ ಕೃಷಿಯ ಪೂರಕ ಚಟುವಟಿಕೆಗಳನ್ನು ನಡೆಸಲು ಕೃಷಿಕರಿಗೆ ಅನುಕೂಲ ಆಗುತ್ತಿತ್ತು. ಆದರೆ ನೀರು ಬಿಡುವುದನ್ನು ನಿರ್ಧಾರ ಮಾಡುವ ನೀರಾವರಿ ಸಲಹಾ ಸಮಿತಿ ಸಭೆಯೇ ಇನ್ನೂ ನಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಕೂಡ ಶುಕ್ರವಾರ (ಜು.11) ನಡೆದಿದ್ದ ಅಧಿಕಾರಿಗಳ ಸಭೆಯಲ್ಲಿ ಹಾರಂಗಿ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಈ ತಿಂಗಳ 17ಕ್ಕೆ ನೀರಾವರಿ ಸಲಹಾ ಸಮಿತಿ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಾಲುವೆಗೆ ನೀರು ಬಿಡುಗಡೆ ಬಗ್ಗೆ ನಿರ್ಧಾರ ಆಗಲಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಈ ಬಾರಿ ಮಳೆ ವಾಡಿಕೆಗಿಂತ ತುಸು ಹೆಚ್ಚೇ ಬಂದಿದ್ದು ಕೃಷಿಕರಿಗೆ ಅನುಕೂಲವಾಗಿದ್ದರೂ ತೋಟಗಾರಿಕೆಗೆ ತೊಡಕುಂಟಾಗಿದೆ. ಆದರೆ ನದಿ ನೀರನ್ನೇ ಅವಲಂಬಿಸಿರುವ ರೈತರಿಗೆ ಜಲಾಶಯದಿಂದ ಸಮಯೋಚಿತವಾಗಿ ಕಾಲುವೆಗಳ ಮೂಲಕ ನೀರನ್ನು ಒದಗಿಸಿದಲ್ಲಿ ಕೃಷಿ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಸಂಬAಧಪಟ್ಟ ಇಲಾಖೆ ಆದಷ್ಟು ಬೇಗ ಈ ಬಗ್ಗೆ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.

ಹೊಸೊಕ್ಲು ಲತಾ ಮೊಣ್ಣಪ್ಪ, ಕಡಿಯತ್ತೂರು

ಜಲಾಶಯದಲ್ಲಿ ಸಂಗ್ರಹವಾದ ನೀರನ್ನು ಅನಾವಶ್ಯಕವಾಗಿ ನದಿಗೆ ಹರಿಬಿಟ್ಟು ನೀರನ್ನು ಪೋಲು ಮಾಡುವುದು ಸರಿಯಲ.್ಲ ಅದೇ ನೀರನ್ನು ಕಾಲುವೆಗಳ ಮೂಲಕ ಹರಿಸಿದರೆ ಒಂದೆಡೆ ಕಾಲುವೆಗಳು ಸ್ವಚ್ಚಗೊಳ್ಳುತ್ತದೆ. ಕಾಲುವೆ ನೀರು ಅವಶ್ಯಕವಾಗಿರುವ ಕಡೆ ರೈತರು ಅದನ್ನು ಬಳಸಿಕೊಳ್ಳುತ್ತಾರೆ. ಅಧಿಕಾರಿ ವರ್ಗದವರ ನಿರ್ಲಕ್ಷö್ಯದಿಂದ ಸಂಗ್ರಹಗೊAಡ ನೀರು ಪುನಃÀ ನದಿ ಸೇರುವುದು ಅನುಪಯುಕ್ತ ಕಾರ್ಯವಾಗಿದೆ.

ಬಿ.ಯು. ಮೋನಿಷ್ ಮಂದಣ್ಣ, ಪಾಲಂಗಾಲ, ವಿರಾಜಪೇಟೆ

ಹಾರಂಗಿ ಜಲಾಶಯ ತುಂಬಿರುವುದು ರೈತಾಪಿ ವರ್ಗಕ್ಕೆ ನೆಮ್ಮದಿ ತಂದಿರುವ ವಿಷಯ. ಜಲಾಶಯದ ನೀರು ಕೃಷಿಗೆ ಉಪಯೋಗವಾಗಬೇಕು. ಹಾರಂಗಿ ಜಲಾಶಯ ನಿರ್ಮಾಣದಿಂದ ಆಸ್ತಿ ಪಾಸ್ತಿ ಕಳಕೊಂಡವರು ಕೊಡಗಿನ ಜನರು. ಮೊದಲು ಇಲ್ಲಿನ ರೈತರಿಗೆ ನೀರು ಕೊಟ್ಟು ನಂತರ ಹೊರ ಜಿಲ್ಲೆ ಮತ್ತು ಹೊರರಾಜ್ಯ ಗಳಿಗೆ ಕೊಡಲಿ.

ಹೆಚ್.ಎ. ನಾಗರಾಜು, ಸದಸ್ಯ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ

ಹಾರಂಗಿ ಜಲಾಶಯ ಬರ್ತಿಯಾಗಿ ನದಿಗೆ ನೀರು ಹರಿಯ ಬಿಡಲಾಗಿದೆ. ಆದರೆ ಕಾಲುವೆ ಮೂಲಕ ಇನ್ನೂ ನೀರು ಬಿಡದಿರುವುದು ದುರಂತ. ಕೊಡಗಿನಲ್ಲಿ ಇರುವ ರೈತರಿಗೆ ಇನ್ನೂ ಅನುಕೂಲ ಮಾಡಿಕೊಟ್ಟಿಲ್ಲ. ಕಾಲುವೆ ಮೂಲಕ ನೀರು ಹರಿಸಿದರೆ ಸ್ಥಳೀಯ ರೈತರಿಗೆ ಅನುಕೂಲವಾಗುತ್ತದೆ. ಕೊಡಗಿನಲ್ಲಿ ಎಷ್ಟೇ ಮಳೆ ಬಂದರು ಸಹ ಹಾರಂಗಿ ಜಲಾನಯನ ಪ್ರದೇಶದ ರೈತರಿಗೆ ಹಾರಂಗಿ ನೀರು ಅತ್ಯಾವಶ್ಯಕವಾಗಿದೆ.

ಪೂರ್ಣಿಮಾ ಕಿರಣ್, ಸದಸ್ಯೆ, ಗ್ರಾಮ ಪಂಚಾಯತ್, ಹಂಡ್ಲಿ

ಕೊಡಗಿನಲ್ಲಿ ಇರುವ ಹಾರಂಗಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಬಗ್ಗೆ ನೀರಾವರಿ ಸಲಹಾ ಸಮಿತಿ ಸರಿಯಾದ ನಿರ್ಧಾರ ತೆಗೆದುಕೊಂಡAತಿಲ್ಲ. ಈ ಸಮಿತಿಯೇ ನಾಮ್‌ಕಿ ಅವಸ್ಥೆ ಎಂಬAತಾಗಿದೆ ಎಂದು ಕಾಣುತ್ತಿದೆ. ಸುಮಾರು 12 ಟಿಎಂಸಿ ನೀರು ನದಿಗೆ ಹರಿಸಿದ್ದರೂ ಕಾಲುವೆ ಮೂಲಕ ಇನ್ನೂ ನೀರು ಬಿಟ್ಟಿಲ್ಲ. ಇನ್ನಾದರೂ ನೀರಾವರಿ ಸಲಹಾ ಸಮಿತಿ ಎಚ್ಚೆತ್ತುಕೊಂಡ ಸಭೆ ಕರೆದು ಸ್ಥಳೀಯ ರೈತರಿಗೆ ಅನುಕೂಲವಾಗುವಂತೆ ಕ್ರಮ ತೆಗೆದುಕೊಳ್ಳಲಿ.

ಉಮಾಶಂಕರ್, ಅಧ್ಯಕ್ಷ, ಕಾಫಿ ಬೆಳೆಗಾರರ ಸಂಘ, ಶನಿವಾರಸಂತೆ

ಕೃಷಿ ಉದ್ದೇಶಕ್ಕಾಗಿ ಹಾರಂಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಬೇಕು ಎನ್ನುವುದು ನಮ್ಮ ನಿಲುವು ಕೂಡ ಆಗಿದೆ. ಈ ಸಂಬAಧ ಈಗಾಗಲೇ ರೈತರು ಕರೆ ಮಾಡಿ ಒತ್ತಾಯ ಮಾಡುತ್ತಿದ್ದಾರೆ. ಕಾಲುವೆಗಳಲ್ಲಿ ನೀರು ಹರಿಸಿದರೆ ಕೃಷಿಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿ ಆಗುತ್ತದೆ ಎನ್ನುವುದು ರೈತರು ಅಭಿಪ್ರಾಯ. ವಿಷಯವನ್ನು ಈಗಾಗಲೇ ಶಾಸಕ ಡಾ. ಮಂತರ್ ಗೌಡ ಅವರ ಗಮನಕ್ಕೆ ತರಲಾಗಿದೆ. ಸದ್ಯದಲ್ಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಎಂ.ಎ. ಮುಸ್ತಾಫ, ಸದಸ್ಯ, ನೀರಾವರಿ ಸಲಹಾ ಸಮಿತಿ

ಹಾರಂಗಿ ಜಲಾಶಯ ಈ ಬಾರಿ ಮೇ ತಿಂಗಳಿನಲ್ಲೇ ಬಹುತೇಕ ಭರ್ತಿ ಆಗಿದೆ. ಆದರೆ ರೈತರಿಗೆ ಏನೂ ಪ್ರಯೋಜನ ಆಗುತ್ತಿಲ್ಲ. ಈ ಸಮಯದಲ್ಲಿ ಕಾಲುವೆಗಳಲ್ಲಿ ನೀರು ಹರಿಸಬೇಕಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಇನ್ನು ಕೂಡ ಕ್ರಮ ತೆಗೆದುಕೊಂಡಿಲ್ಲ. ಬಹುತೇಕ ಕಡೆಗಳಲ್ಲಿ ಕಾಲುವೆಗಳ ದುರಸ್ತಿ ಕಾರ್ಯವೂ ನಡೆದಿಲ್ಲ. ಕೃಷಿ ಉದ್ದೇಶಕ್ಕಾಗಿ ಆದಷ್ಟು ಶೀಘ್ರ ಕಾಲುವೆಗಳಿಗೆ ನೀರು ಹರಿಸಬೇಕು. ಇದಕ್ಕೂ ಮೊದಲು ಕಾಲುವೆಗಳನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೆ ನೀರು ಪೋಲಾಗುವ ಸಾಧ್ಯತೆಯೇ ಹೆಚ್ಚು.

ಎ.ಪಿ. ಡಾಟಿ, ಮಾಜಿ ಸದಸ್ಯೆ, ಗ್ರಾ.ಪಂ. ಗುಡ್ಡೆಹೊಸೂರು

ನಮ್ಮ ಭಾಗದ ರೈತರು ಸಂಪೂರ್ಣವಾಗಿ ಹಾರಂಗಿ ಜಲಾಶಯದ ನೀರನ್ನೇ ಅವಲಂಭಿಸಿದ್ದಾರೆ. ಜಲಾಶಯ ಭರ್ತಿ ಆಗಿರುವುದರಿಂದ ನದಿಗೆ ನೀರು ಹರಿಸುತ್ತಿರುವಂತೆ ಸ್ವಲ್ಪ ಭಾಗ ಕಾಲುವೆಗಳಿಗೂ ಬಿಟ್ಟರೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುತ್ತದೆ. ನಮ್ಮ ವ್ಯಾಪ್ತಿಯ ಕಾಲುವೆಗಳನ್ನು ನಾವೇ ದುರಸ್ತಿ ಮಾಡಿಕೊಳ್ಳಲು ಕೂಡ ಇದರಿಂದ ಸಹಕಾರಿ ಆಗುತ್ತದೆ. ಈ ಬಾರಿ ವೈಜ್ಞಾನಿಕವಾಗಿ ನೀರು ಹರಿಸುವ ಮೂಲಕ ಬೇಸಿಗೆ ಬೆಳೆಗೂ ನೀರು ಕೊಡುವಂತಾದರೆ ಉತ್ತಮ.

ಕೆ.ಕೆ. ನಾಗರಾಜ ಶೆಟ್ಟಿ, ಕೂಡಿಗೆ

ನೀರಾವರಿ ಸಲಹಾ ಸಮಿತಿ ಸಭೆಯ ನಂತರ ಕೃಷಿ ಉದ್ದೇಶಕ್ಕಾಗಿ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ತಿಂಗಳ 17ಕ್ಕೆ ನೀರಾವರಿ ಸಲಹಾ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯುವ ಬಗ್ಗೆ ಬಹುತೇಕ ನಿರ್ಧಾರ ಆಗಿದೆ. ಈ ಸಭೆಯಲ್ಲಿ ಚರ್ಚಿಸಿ ಕಾಲುವೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು ಎನ್ನುವುದನ್ನು ತೀರ್ಮಾನಿಸಲಾಗುತ್ತದೆ. ಈ ಸಭೆ ನಡೆಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಈಗಾಗಲೇ ಸೂಚನೆ ನೀಡಿದ್ದಾರೆ.

ಐ.ಕೆ. ಪುಟ್ಟಸ್ವಾಮಿ, ಇಇ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net