ಹಾರಂಗಿಯಲ್ಲಿ ನೀರಿನ ಮಟ್ಟ ಕುಸಿತ

13mdk03
Published on

ಮಡಿಕೇರಿ:
ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ತೀವ್ರವಾಗಿ ಕುಸಿದಿದೆ. ಏಪ್ರಿಲ್ ತಿಂಗಳ ಮಧ್ಯಭಾಗದಲ್ಲೇ ಈ ಪರಿಸ್ಥಿತಿ ಇದ್ದು, ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಬಿರು ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗುವ ಸಾಧ್ಯತೆಯಿದೆ.

ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳ ೧,೩೪,೮೯೫ ಎಕರೆ ಪ್ರದೇಶಕ್ಕೆ ನೀರೊದಗಿಸುವ ಹಾರಂಗಿ ಜಲಾಶಯದಲ್ಲಿ ನೀರು ತಳ ಸೇರಿದೆ. ಗುರುವಾರದ (ಏ.೧೩) ಮಾಹಿತಿ ಪ್ರಕಾರ ೨೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ೨೮೨೧.೫೭ ಅಡಿಗಳಿಗೆ ನೀರಿನ ಮಟ್ಟ ಇಳಿದಿದೆ. ಕಳೆದ ವರ್ಷ ಇದೇ ದಿನ ೨೮೪೮.೫೦ ಅಡಿಗಳಷ್ಟು ನೀರು ಇತ್ತು. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ೨.೦೬೨ ಟಿಎಂಸಿ ಗಳಷ್ಟು ನೀರು ಬಳಕೆಗೆ ಲಭ್ಯವಿದೆ. ಕಳೆದ ವರ್ಷ ಇದೇ ದಿನ ೪.೮೩೩ ಟಿಎಂಸಿ ಬಳಕೆಗೆ ಯೋಗ್ಯ ನೀರು ಜಲಾಶಯದಲ್ಲಿ ಇತ್ತು.

ಕುಡಿಯುವ ನೀರಿನ ಉದ್ದೇಶಕ್ಕೆ ಕಳೆದ ತಿಂಗಳು ೫ ದಿನಗಳ ಕಾಲ ನದಿಗೆ ನೀರು ಹರಿಸಲಾಗಿತ್ತು. ಒಂದು ವೇಳೆ ಮಳೆ ಬಾರದಿದ್ದಲ್ಲಿ ಪ್ರತಿನಿತ್ಯ ೭ ದಿನಗಳ ಕಾಲ ನದಿಗೆ ನೀರು ಬಿಟ್ಟರೆ ಜಲಾಶಯದ ನೀರು ಡೆಡ್ ಸ್ಟೋರೇಜ್ ಮಟ್ಟ ತಲುಪಲಿದೆ ಎನ್ನುತ್ತಾರೆ ಅಧಿಕಾರಿಗಳು. ಅಣೆಕಟ್ಟೆಯಿಂದ ನೇರವಾಗಿ ಎಲ್ಲಿಗೂ ಕುಡಿಯುವ ನೀರಿನ ಸರಬರಾಜು ಇಲ್ಲ. ಆದರೆ ಹಾರಂಗಿ ನದಿ ಕಾವೇರಿ ನದಿಗೆ ಸೇರಿದ ನಂತರ ಕೆಆರ್‌ಎಸ್ ತನಕದ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಪರೋಕ್ಷವಾಗಿ ಹಾರಂಗಿ ನದಿ ನೀರು ಬಳಕೆ ಆಗುತ್ತದೆ. ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ಸುತ್ತಲಿನ ಪ್ರದೇಶಗಳಲ್ಲಿ ಬೇಸಿಗೆ ಮಳೆ ಉತ್ತಮವಾಗಿ ಸುರಿದರೆ ಆತಂಕ ದೂರವಾಗಲಿದೆ.
ಕಳೆದ ೨ ದಶಕಗಳಿಂದ ಹಾರಂಗಿ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಕೊಡುತ್ತಿಲ್ಲ. ಹಾಗಾಗಿ ಅಚ್ಚುಕಟ್ಟು ಪ್ರದೇಶದ ರೈತರು ಬೇಸಿಗೆ ಬೆಳೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಇದರಿಂದಾಗಿ ಮಾರ್ಚ್‌ನಿಂದ ಮೇ ತನಕ ನಾಲೆಗಳಿಗೆ ನೀರು ಹರಿಸುವ ಒತ್ತಡದಿಂದ ಅಣೆಕಟ್ಟೆ ಅಧಿಕಾರಿಗಳು ಪಾರಾಗಿದ್ದಾರೆ. ಆದರೆ ಬಿಸಿಲಿನ ಬೇಗೆ ಹೀಗೆಯೇ ಮುಂದುವರಿದರೆ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಕಂಡುಬರುತ್ತಿದೆ.

ಕೊಡಗಿನಲ್ಲಿ ಒಣಹವೆ ಮುಂದುವರಿದಿದ್ದು, ಶುಕ್ರವಾರ (ಏ.೧೪) ತನಕವೂ ಇದೇ ಸ್ಥಿತಿ ಇರಲಿದೆ ಎನ್ನುತ್ತಾರೆ ಹವಾಮಾನ ಪರಿಣಿತರು. ಜಿಲ್ಲೆಯಾದ್ಯಂತ ಬಿಸಿಲಿನ ಕಾವು ಅಧಿಕವಾಗುತ್ತಲೇ ಇದ್ದು, ಜನಸಾಮಾನ್ಯರು ಮಾತ್ರವಲ್ಲದೆ ಸಸ್ಯ ಸಂಕುಲವೂ ಒಂದು ಮಳೆಯ ನಿರೀಕ್ಷೆ ಹೊಂದಿವೆ. ಏ.೧೫ರ ನಂತರ ಮೂರು ದಿನ ಮಳೆಯಾಗುವ ಸಾಧ್ಯತೆ ಇದ್ದರೂ ಇದು ಜಿಲ್ಲೆಯ ಕೆಲವು ಭಾಗಕ್ಕೆ ಮಾತ್ರ ಸೀಮಿತ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net