ಮನೆ, ಮನದಲ್ಲೂ ತಿರಂಗ: ಕೇಂದ್ರ ಸರ್ಕಾರದ ಕರೆಗೆ ವ್ಯಾಪಕ ಸ್ಪಂದನೆ

Tiranga
Published on

ಮಂಡ್ಯ: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ಮೂರು ದಿನದ ಹರ್ ಘರ್ ತಿರಂಗ ಅಭಿಯಾನಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ಸಿಕ್ಕಿತು. ಅದರಂತೆ ಶನಿವಾರ ಸರ್ಕಾರಿ, ಖಾಸಗಿ ಕಟ್ಟಡ ಸೇರಿದಂತೆ ಜನರು ಕೂಡ ತಮ್ಮ ಮನೆ ಮೇಲೆ ಬಾವುಟವನ್ನು ಕಟ್ಟಿ ಘೋಷಣೆ ಕೂಗಿ ಸಂಭ್ರಮಿಸಿದರು.
ಬಿಜೆಪಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಕೆಲವೆಡೆ ಉಚಿತವಾಗಿ ಬಾವುಟ ವಿತರಿಸಿದ್ದರು. ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗಿತ್ತು. ಬೆಳಗ್ಗೆಯೇ ಮನೆ, ಕಟ್ಟಡಗಳ ಮೇಲೆ ತಿರಂಗ ಧ್ವಜವನ್ನು ಹಾರಿಸಲಾಯಿತು. ಅಧಿಕಾರಿಗಳು, ಸಾರ್ವಜನಿಕರು ಕುಟುಂಬದವರೊಡಗೂಡಿ ಬಾವುಟ ಕಟ್ಟಿ ಘೋಷಣೆ ಕೂಗಿ ದೇಶಪ್ರೇಮ ಮೆರೆದರು. ಇದಲ್ಲದೆ ಜಿಲ್ಲೆಯ ಪ್ರಮುಖ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳದಲ್ಲಿ ಅಳವಡಿಸಲಾಗಿದ್ದ ತಿರಂಗ ಬಣ್ಣದ ದೀಪಾಲಂಕಾರ ಕಂಗೊಳಿಸಿತು. ಅಂತೆಯೇ ಅಭಿಯಾನದ ಅಂಗವಾಗಿ ಜಾಥಾ ಭರ್ಜರಿಯಾಗಿಯೇ ನಡೆದವು. ಕೆಲವೆಡೆ ಬಾವುಟ ಕಟ್ಟದವರ ಮನವೊಲಿಸುವ ಕೆಲಸವನ್ನು ಮಾಡಲಾಯಿತು.
ನಗರದಲ್ಲಿ ಜಾಗೃತಿ ಅಭಿಯಾನ: ನಗರದಲ್ಲಿ ಹರ್ ಘರ್ ತಿರಂಗ ಘೋಷ ವಾಕ್ಯದೊಂದಿಗೆ ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ಮೂಲಕ ಜಾಗೃತಿ ಅಭಿಯಾನ ನಡೆಸಿದರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಯುವ ಮೋರ್ಚಾ, ಒಬಿಸಿ ಮೋರ್ಚಾ, ನಗರ ಮೋರ್ಚಾ ನೇತೃತ್ವದಲ್ಲಿ ದ್ವಿಚಕ್ರ ವಾಹನದಲ್ಲಿ ರಾಷ್ಟಧ್ವಜ ಹಿಡಿದು ದೇಶಾಭಿಮಾನದ ಘೋಷಣೆಗಳನ್ನು ಕೂಗಿದರು. ಆರ್.ಪಿ ರಸ್ತೆ, ನೂರಡಿ ರಸ್ತೆ, ಗುತ್ತಲು ರಸ್ತೆ, ಕಾಳಿಕಾಂಬ ದೇವಾಲಯ, ಪೇಟೆ ಬೀದಿ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ರ‌್ಯಾಲಿ ನಡೆಯಿತು.
ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಬಿ.ರಮೇಶ್ ವಿಶ್ವಕರ್ಮ, ಯುವ ಮೋರ್ಚಾ ಪ್ರಧಾನ ಅಧ್ಯಕ್ಷ ವಿಶೃತ್ ನಾಗೇಂದ್ರ, ಕಾರ್ಯದರ್ಶಿ ಸಂದೇಶ್, ನಗರ ಮೋರ್ಚಾ ಅಧ್ಯಕ್ಷ ವಿವೇಕ್, ನಗರಸಭೆ ನಾಮನಿರ್ದೇಶಿತ ಸದಸ್ಯರಾದ ಶಿವಕುಮಾರ್ ಕೆಂಪಯ್ಯ, ಪ್ರಸನ್ನ, ಚಂದ್ರು, ಶಿವಲಿಂಗು, ನವನೀತ್‌ಗೌಡ, ರಾಜೇಶ್, ವಿನೋದ, ಮಂಜು ಇತರರಿದ್ದರು.
ಹೊಸಹಳ್ಳಿಯಲ್ಲೂ ಆಚರಣೆ: ಅಭಿಯಾನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ನಗರದ ಹೊಸಹಳ್ಳಿ ಬಡಾವಣೆಯ 16, 17, 18 ಮತ್ತು 20ನೇ ವಾರ್ಡ್‌ನಲ್ಲಿ ವಾಸಿವಿರುವ ಜನರ ಮನೆಗಳಿಗೆ ತೆರಳಿ ಬಾವುಟ ವಿತರಿಸಿದರು. ಅಂತೆಯೇ ಮೂರು ದಿನದ ಆಚರಣೆ ಹಾಗೂ ನಂತರ ಅನುಸರಿಸಬೇಕಾದ ನಿಯಮದ ಬಗ್ಗೆ ಮಾಹಿತಿ ನೀಡಲಾಯಿತು. ಹೊಸಹಳ್ಳಿ ನಾಗೇಶ್, ಶಿವು, ಪೂಜಾರಿ ಪ್ರಸನ್ನ, ಮಾದರಾಜೇ ಅರಸ್ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಮನೆಗಳಿಗೆ ಬಾವುಟ ವಿತರಣೆ ಮಾಡಲಾಯಿತು. ಇನ್ನು ನಗರದ ಸಂತೋಷ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬಾವುಟ ಹಿಡಿದು ಜಾಥಾ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net