ಮೂರು ದಿನ ಹರ್ ಘರ್ ತಿರಂಗಾಕ್ಕೆ ಅವಕಾಶ

DC DIVYAPRABHU
Published on

ಚಿತ್ರದುರ್ಗ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಸೂಚನೆಯಂತೆ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ತಿಳಿಸಿದ್ದಾರೆ.

ಆ. 13ರಿಂದ 15ರವರೆಗೆ 3 ದಿನ ಜಿಲ್ಲೆಯ ಪ್ರತಿಯೊಬ್ಬರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೂಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದ್ದಾರೆ.

ಈ ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳು, ಉದ್ಯಮಗಳು, ಸಾರ್ವಜನಿಕ ಸ್ಥಳಗಳು, ಸಂಘ-ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಬೇಕು. ಈ ಮೂಲಕ ಗೌರವ, ಪ್ರೀತಿ, ಅಭಿಮಾನ ಮೆರೆಯಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಗೆ 25 ಸಾವಿರ ರಾಷ್ಟ್ರಧ್ವಜ ಹಂಚಿಕೆ ಮಾಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಹಾರಿಸಬೇಕು. ಹೀಗಾಗಿ ಶಿಷ್ಟಾಚಾರ ತಪ್ಪದೆ ಪಾಲಿಸಿ. ಎಲ್ಲರಿಗೂ ಸುಲಭವಾಗಿ ರಾಷ್ಟ್ರಧ್ವಜ ಲಭ್ಯವಾಗುವಂತೆ ಮಾಡಲು ಅಗತ್ಯ ಪ್ರಮಾಣದ ಧ್ವಜಗಳನ್ನು ನಗರದ ತರಾಸು ರಂಗಮಂದಿರ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ದಾಸ್ತಾನು ಮಾಡಿ, ಅಲ್ಲಿಯೇ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಲ್ಲ ಸ್ಥಳೀಯ ಸಂಸ್ಥೆಗಳು, ಗ್ರಾಪಂಗಳ ಮೂಲಕವೂ ಸಾರ್ವಜನಿಕರಿಗೆ ರಾಷ್ಟ್ರಧ್ವಜ ಲಭ್ಯವಾಗುವಂತೆ ಮಾಡಲಾಗಿದೆ. ಶಾಲಾ-ಕಾಲೇಜುಗಳಿಗೂ ಹಂಚಲಾಗಿದೆ. ಪ್ರತಿ ಧ್ವಜಕ್ಕೆ 25ರಿಂದ 50 ರೂ. ದರ ನಿಗದಿಪಡಿಸಲಾಗಿದೆ. ಅಭಿಯಾನ ಯಶಸ್ವಿಗೊಳಿಸಿ ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net