ಮಂಗಳೂರಿನಲ್ಲಿ ‘ಹರ್ ಘರ್ ತಿರಂಗಾ’ ವೈಭವದ ಆಚರಣೆಗೆ ಪಾಲಿಕೆ ನಿರ್ಧಾರ

MCC phot
Published on

ಮಂಗಳೂರು: ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಗೆ ಸಿದ್ಧತೆ ನಡೆಸುತ್ತಿದ್ದು, ಆ.13ರಿಂದ 15ರವರೆಗೆ ಹರ್ ಘರ್ ತಿರಂಗಾ (ಮನೆ ಮನೆಗೂ ರಾಷ್ಟ್ರೀಯ ಧ್ವಜ) ಅಭಿಯಾನ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಮನೆಗಳಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವುದರ ಜತೆಗೆ ಸ್ಮಾರ್ಟ್ ಸಿಟಿಯಲ್ಲಿ ತಿರಂಗಾ ವೈಭವ ತರಲು ಪಾಲಿಕೆ ಆಡಳಿತ ನಿರ್ಧರಿಸಿದೆ.

ಅಮೃತ ಮಹೋತ್ಸವ ಸಂಭ್ರಮ ಹಾಗೂ ಸ್ವಾತಂತ್ರ್ಯಕ್ಕೆ ಕಾರಣವಾದ ಎಲ್ಲರನ್ನೂ ಗೌರವಿಸುವುದು ಹಾಗೂ ಸ್ಮರಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಪಾಲಿಕೆ ವತಿಯಿಂದ 60 ಸಾವಿರ ರಾಷ್ಟ್ರಧ್ವಜವನ್ನು ಪ್ರತಿ ಮನೆ, ಕಟ್ಟಡಗಳಲ್ಲಿ ಹಾರಿಸಲು ಉದ್ದೇಶಿಸಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಎಂಪಿಡಬ್ಲ್ಯೂ ಸಿಬ್ಬಂದಿ ಮತ್ತು ವಾರ್ಡ್ ಕಮಿಟಿ ನೋಡಲ್ ಅಧಿಕಾರಿಗಳಿಂದ ಮನೆ ಮನೆಗೆ ಭೇಟಿ ನೀಡಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯದೊಂದಿಗೆ ರಾಷ್ಟ್ರಧ್ವಜವನ್ನು ಉಚಿತವಾಗಿ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಂಘ ಸಂಸ್ಥೆಗಳು ಹಾಗೂ ಅಪಾರ್ಟ್‌ಮೆಂಟ್ ಕಟ್ಟಡದ ಮಾಲೀಕರು ಸ್ವಇಚ್ಚೆಯಿಂದ ರಾಷ್ಟ್ರಧ್ವಜವನ್ನು ಖರೀದಿಸಿ ಹಾರಿಸಲು ಮನವಿ ಮಾಡಲಾಗಿದೆ. ಶಾಲಾ ಕಾಲೇಜು ಸಂಸ್ಥೆಗಳ ಸಹಕಾರದೊಂದಿಗೆ ಮಕ್ಕಳ ಮುಖಾಂತರ ರಾಷ್ಟ್ರಧ್ವಜವನ್ನು ಎಲ್ಲ ಮನೆಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾಲಿಕೆ ಕಚೇರಿ ಕಟ್ಟಡ, ತುಂಬೆ ವೆಂಟೆಡ್ ಡ್ಯಾಂ, ಸುರತ್ಕಲ್ ವಲಯ ಕಚೇರಿ, ಪುರಭವನ ಕಟ್ಟಡ, ಈಜುಕೊಳ, ಲಾಲ್‌ಭಾಗ್, ವಾಣಿಜ್ಯ ಸಂಕೀರ್ಣ ಕಚೇರಿ ಕಟ್ಟಡ, ಪ್ರಮುಖ ವೃತ್ತಗಳು, ಲಾಲ್‌ಭಾಗ್ ವೃತ್ತ, ಬ್ರಹ್ಮಶ್ರೀ ನಾರಾಯಣಗುರು ವೃತ್ತ, ಗೋವಿಂದ ಪೈ ವೃತ್ತ, ಎ.ಬಿ. ಶೆಟ್ಟಿ ವೃತ್ತ, ಕ್ಲಾಕ್ ಟವರ್ ವೃತ್ತ, ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ವೃತ್ತ ಜೆಪ್ಪು, ಮಾರ್ನಮಿಕಟ್ಟೆ ವೃತ್ತ, ಕೋಟಿಚೆನ್ನಯ ವೃತ್ತ ನಂದಿಗುಡ್ಡೆ, ಸರ್ಕೀಟ್ ಹೌಸ್ ಬಳಿ ವೃತ್ತ, ಬೋಂದೆಲ್ ವೃತ್ತ, ಸುರತ್ಕಲ್ ವೃತ್ತ, ಕದ್ರಿ-ಮಲ್ಲಿಕಟ್ಟೆ ವೃತ್ತ ತ್ರಿವರ್ಣದ ಎಲ್ಇಡಿ ದೀಪಗಳೊಂದಿಗೆ ಅಲಂಕಾರ ಮಾಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net